ದತ್ತಮಾಲಾ ಅಭಿಯಾನ: ಚಿಕ್ಕಮಗಳೂರಲ್ಲಿ ಮಾಲಾಧಾರಿಗಳಿಂದ ಭಿಕ್ಷಾಟನೆ, ಬಿಗಿ ಪೊಲೀಸ್ ಭದ್ರತೆ - Datta mala Abhiyan by Sriramsena activists
Published : Nov 4, 2023, 9:03 PM IST
ಚಿಕ್ಕಮಗಳೂರು:ದತ್ತ ಮಾಲಾಧಾರಣೆ ಹಿನ್ನೆಲೆ ನಗರದ ವಿಜಯಪುರದಲ್ಲಿ ಮಾಲಾಧಾರಿಗಳು ಭಿಕ್ಷಾಟನೆ ನಡೆಸಿದರು. ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಮಾಲಾಧಾರಿಗಳು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದರು. ದತ್ತ ಮಾಲಾಧಾರಿಗಳು ರಾಜ್ಯಾದ್ಯಂತ ಭಿಕ್ಷಾಟನೆ ನಡೆಸಿದ್ದು, ಇದರಿಂದ ಬಂದ ಪಡಿ ಅಂದರೆ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಎಲ್ಲ ವಸ್ತುಗಳನ್ನು ಬಡವರಿಗೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಶ್ರೀರಾಮಸೇನೆ ಮುಖಂಡರು ತಿಳಿಸಿದ್ದಾರೆ.
ನಾಳೆ ಮಾಲಾಧಾರಿಗಳು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಇದಕ್ಕೂ ಮುನ್ನ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, 5,000ಕ್ಕೂ ಅಧಿಕ ಮಾಲಾಧಾರಿಗಳು ಸೇರುವ ನಿರೀಕ್ಷೆ ಇದೆ. ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಹಾರಾಷ್ಟ್ರದ ಅಗೋರಿ ವಿವೇಕನಾಥ್ ಜೀ ಇತರರು ಭಾಗಿಯಾಗಲಿದ್ದಾರೆ.
ಬಿಗಿ ಭದ್ರತೆ:ದತ್ತಮಾಲಾ ಅಭಿಯಾನ ಹಿನ್ನೆಲೆ ಚಿಕ್ಕಮಗಳೂರಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನಾಂ ದತ್ತಾತ್ರೇಯ ಸ್ವಾಮಿ ದರ್ಗಾ ಸೇರಿದಂತೆ ಜಿಲ್ಲೆಯಾದ್ಯಂತ 2,000ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲೆಯ ಗಡಿಭಾಗ ಸೇರಿದಂತೆ 26 ಚೆಕ್‌ಪೋಸ್ಟ್, 49 ಸೆಕ್ಟರ್ ಆಫೀಸರ್ ನೇಮಿಸಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ, ಡ್ರೋನ್ ಕ್ಯಾಮರಾ ಕಣ್ಗಾವಲು ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಇಂದು ಚಿಕ್ಕಮಗಳೂರು ಎಸ್ಪಿ ಡಾ. ವಿಕ್ರಮ್ ಅಮಟೆ ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.