ಮಾರುಕಟ್ಟೆಗೆ ಲಗ್ಗೆಯಿಟ್ಟ ಪಿಒಪಿ ಮೂರ್ತಿಗಳು.. ಧಾರವಾಡದಲ್ಲಿ ಅಧಿಕಾರಿಗಳಿಂದ ದಾಳಿ - ಕೃತಕ ಬಣ್ಣ ಲೇಪಿತ ಪಿಓಪಿ
Published : Aug 27, 2023, 11:00 PM IST
ಧಾರವಾಡ : ನಿಷೇಧವಿದ್ದರೂ ಸಹ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಅವುಗಳ ನಿಯಂತ್ರಣಕ್ಕೆ ಅಧಿಕಾರಿಗಳು ಸಮರ ಸಾರಿದ್ದಾರೆ. ಪಿಒಪಿ ಗಣಪತಿ ಮೂರ್ತಿ ಮಾರಾಟದ ಸ್ಥಳಕ್ಕೆ ಅಧಿಕಾರಿಗಳು ತೆರಳಿ ದಾಳಿ ಮಾಡಿದ್ದಾರೆ.
ಧಾರವಾಡದ ಉಪವಿಭಾಗಾಧಿಕಾರಿ ಅಶೋಕ ತೇಲಿ ನೇತೃತ್ವದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಲಿಂಗಾಯತ ಭವನದ ಹತ್ತಿರವಿರುವ ಸ್ಥಳಗಳಿಗೆ ತೆರಳಿ ದಿಢೀರ್ ದಾಳಿ ಮಾಡಿದ್ದಾರೆ.
ಪರಿಸರಕ್ಕೆ ಹಾನಿಯಾಗುತ್ತದೆ. ನೀರಿನ ಮೂಲಕ್ಕೆ ದೊಡ್ಡ ಕಂಟಕ ಆಗುತ್ತದೆ ಎಂಬ ಕಾರಣಕ್ಕೆ 2016ರಿಂದ ರಾಜ್ಯದಲ್ಲಿ ಪಿಒಪಿ ನಿರ್ಮಿತ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದೆ. ಉತ್ತರ ಕರ್ನಾಟಕದ ಬಹುತೇಕ ಕಡೆ ಮಹಾರಾಷ್ಟ್ರದಿಂದ ಸದ್ದಿಲ್ಲದೇ ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದು, ಇದನ್ನು ತಡೆಯುವುದಕ್ಕೆ ಅಧಿಕಾರಿಗಳು ಫೀಲ್ಡ್ಗಿಳಿದಿದ್ದಾರೆ.
ಧಾರವಾಡದ ಮಾರುಕಟ್ಟೆಯಲ್ಲಿ ಮಣ್ಣಿನ ಮೂರ್ತಿಗಳ ಹೆಸರಿನಲ್ಲಿ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಕೆಲವರು ಕೇಳ್ತಿಲ್ಲ. ಹೀಗಾಗಿ, ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಮೊದಲ ಹಂತದ ದಾಳಿಯಲ್ಲಿ ಕೆಲವು ವ್ಯಾಪಾರಿಗಳು ಪಿಒಪಿ ಮೂರ್ತಿಗೆ ಮಣ್ಣಿನ ಲೇಪನ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಮೂರ್ತಿಯ ಮಾದರಿ ವಶಕ್ಕೆ ಪಡೆದುಕೊಂಡು ತಪಾಸಣೆಗೆ ಕಳುಹಿಸಿದ್ದಾರೆ. ಕೆಲವು ಕಡೆ ಮಣ್ಣು ಮಿಶ್ರಿತ ಪಿಓಪಿ, ಕೃತಕ ಬಣ್ಣ ಲೇಪಿತ ಪಿಓಪಿ, ಉಸುಕು ಮಿಶ್ರಿತ ಪಿಒಪಿ ಗಣಪತಿ ವಿಗ್ರಹಗಳು ಕಂಡು ಬಂದಿವೆ. ಇನ್ನು ಜನರು ಸಹ ಜಾಗೃತರಾಗಬೇಕು. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಪಿಒಪಿ ಮೂರ್ತಿ ಬಳಸಬಾರದು ಎಂದು ಕೋರಿದ್ದಾರೆ.