ಪೊಂಗಲ್ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ: ವಿಡಿಯೋ - ಪೊಂಗಲ್ ಆಚರಣೆ
Published : Jan 14, 2024, 1:40 PM IST
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರೈತರ ಸಂಭ್ರಮದ ಸಂಕ್ರಾಂತಿ ಹಬ್ಬದಲ್ಲಿ ಭಾಗವಹಿಸಿದರು. ಕೇಂದ್ರ ಸಚಿವ ಮುರುಗನ್ ಅವರ ದೆಹಲಿ ನಿವಾಸದಲ್ಲಿ ಪೊಂಗಲ್ ಆಚರಣೆ ಆಯೋಜಿಸಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಮತ್ತು ತೆಲಂಗಾಣ ರಾಜ್ಯಪಾಲ ತಮಿಳ್ಸೈ ಸೌಂದರರಾಜನ್ ಅವರ ಜೊತೆಗೂಡಿ ಪೊಂಗಲ್ ಖಾದ್ಯ ತಯಾರಿಸುವಲ್ಲಿ ಪಾಲ್ಗೊಂಡರು.
ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಮೋದಿ ಗೋವಿಗೆ ಆಹಾರ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದಾದ ಬಳಿಕ ಮಾತನಾಡಿದ ಅವರು, ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಪೊಂಗಲ್ ಹಬ್ಬವು ಏಕ ಭಾರತ ಶ್ರೇಷ್ಠ ಭಾರತದ ಭಾವನೆಯನ್ನು ಬಿಂಬಿಸುತ್ತದೆ. ಈ ಏಕತೆಯ ಭಾವನೆಯು 2047ರ ವಿಕಸಿತ ಭಾರತಕ್ಕೆ ಬಲ ನೀಡಲಿದೆ ಎಂದು ಹೇಳಿದರು.
ದೇಶದಲ್ಲಿ ಶನಿವಾರ ಲೋಹ್ರಿ ಹಬ್ಬವನ್ನು ಆಚರಿಸಲಾಗಿದೆ. ಇಂದು ಮಕರ ಸಂಕ್ರಾಂತಿಯನ್ನು ಆಚರಿಸುತ್ತಿದ್ದೇವೆ. ಇನ್ನು ಕೆಲವರು ನಾಳೆ ಆಚರಿಸುತ್ತಾರೆ. ಮಾಘ ಬಿಹು ಹಬ್ಬ ಕೂಡ ಬರಲಿದೆ. ಹಬ್ಬಗಳು ನಮ್ಮನ್ನು ಒಂದುಗೂಡಿಸುವ ಶಕ್ತಿಯಾಗಿವೆ. ಜನತೆಯ ಬಾಳಲ್ಲಿ ಹಬ್ಬಗಳು ಸುಖ, ಸಮೃದ್ಧಿ, ನೆಮ್ಮದಿಯನ್ನು ತರಲಿ ಎಂದು ಇದೇ ವೇಳೆ ಮೋದಿ ಹಾರೈಸಿದರು.
ಇದನ್ನೂ ಓದಿ:ಮೈಸೂರಲ್ಲಿ ಸಂಕ್ರಾಂತಿ ಸಡಗರ: ಮಾರುಕಟ್ಟೆಯಲ್ಲಿ ಖರೀದಿ ಜೋರು