ಹಳೆಯ ಮನೆಯಲ್ಲಿ 50ಕ್ಕೂ ಹೆಚ್ಚು ಹಾವಿನ ಮರಿಗಳು ಪತ್ತೆ: 24 ಸರ್ಪಗಳನ್ನ ಸಾಯಿಸಿದ ಗ್ರಾಮಸ್ಥರು, 30 ಹಾವುಗಳ ರಕ್ಷಣೆ... ವಿಡಿಯೋ - ಹಾವಿನ ಮರಿಗಳು ಪತ್ತೆ
ರೋಹ್ತಾಸ್ (ಬಿಹಾರ): ಹಳೆಯ ಮನೆಯೊಂದರಲ್ಲಿ ಸುಮಾರು 50ರಿಂದ 60 ಹಾವಿನ ಮರಿಗಳು ಪತ್ತೆಯಾಗಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆಸಿದೆ. ಒಟ್ಟಿಗೆ ಇಷ್ಟೊಂದು ಹಾವುಗಳನ್ನು ಕಂಡ ಜನರು ಆತಂಕಗೊಂಡಿದ್ದಾರೆ. ಅಲ್ಲದೇ, ಈ ಹಾವುಗಳನ್ನು ನೋಡಿದ ಅರಣ್ಯ ಇಲಾಖೆ ತಂಡವೂ ಬೆಚ್ಚಿಬಿದ್ದಿದೆ.
ಇಲ್ಲಿನ ಸೂರ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಏಜ್ಡ್ ಖುರ್ದ್ ಗ್ರಾಮದ ಹಳೆಯ ಅಂತಸ್ತಿನ ಮನೆಯಲ್ಲಿ ಬುಧವಾರ ಏಕಾಏಕಕ್ಕೆ 50ಕ್ಕೂ ಅಧಿಕ ಹಾವುಗಳು ಪತ್ತೆಯಾಗಿವೆ. ಇಲ್ಲಿನ ಕೃಪಾ ನಾರಾಯಣ ಪಾಂಡೆ ಎಂಬುವವರ ಮನೆ ಇದಾಗಿದ್ದು, ಒಂದೊಂದೇ ಹಾವುಗಳು ಹೊರಬರಲಾರಂಭಿಸಿವೆ. ಅಲ್ಲೊಂದು, ಇಲ್ಲೊಂದು ಎಂಬಂತೆ ಸುಮಾರು ಅರ್ಧ ಡಜನ್ ಹಾವುಗಳು ಏಕಾಏಕಿ ಹೊರ ಬಂದಿವೆ. ಇದನ್ನು ಕಂಡು ಗಾಬರಿಗೊಂಡ ಮನೆಯಲ್ಲಿ ವಾಸವಿದ್ದ ಪಾಂಡೆ ಕುಟುಂಬಸ್ಥರು ಅಕ್ಕ - ಪಕ್ಕದವರನ್ನು ಕರೆಯಿಸಿದ್ದಾರೆ.
ಅಲ್ಲದೇ, ಕೆಲ ಸಮಯದ ನಂತರ ಮನೆಯಲ್ಲಿ ಮತ್ತಷ್ಟು ಹಾವುಗಳು ಕಾಣಿಸಿಕೊಳ್ಳಲಾರಂಭಿಸಿವೆ. ಹೀಗಾಗಿ ಜನರೇ ಅವುಗಳನ್ನೂ ಕೊಂದು ಹಾಕಿದ್ದಾರೆ. ಕುಟುಂಬಸ್ಥರ ಪ್ರಕಾರ, ಸುಮಾರು ಎರಡು ಡಜನ್ ಹಾವುಗಳನ್ನು ಕೊಂದರೂ ಹಾವುಗಳು ಹೊರಬರುವುದನ್ನು ನಿಲ್ಲಿಸಲಿಲ್ಲ. ಹೀಗಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿದ ತಕ್ಷಣ ಜಿಲ್ಲೆಯ ಮೂರು ಉಪ ವಿಭಾಗಗಳ ಅರಣ್ಯ ಇಲಾಖೆಯ ರಕ್ಷಣಾ ತಂಡ ಗುರುವಾರ ಗ್ರಾಮಕ್ಕೆ ಆಗಮಿಸಿದೆ. ಸುಮಾರು 30 ಹಾವುಗಳನ್ನು ಈ ತಂಡ ಹಿಡಿದಿದೆ. ನೆಲ ಮತ್ತು ಗೋಡೆಯ ಇಟ್ಟಿಗೆಯನ್ನು ಒಡೆದು ಸುಮಾರು 30 ಹಾವುಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿ ಅಮರ್ ಗುಪ್ತಾ ತಿಳಿಸಿದ್ದಾರೆ. ಈ ಎರಡು ಅಂತಸ್ತಿನ ಮನೆಯನ್ನು 1955ರಲ್ಲಿ ನಿರ್ಮಿಸಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಇದನ್ನೂ ಓದಿ:ಅಡುಗೆ ಮನೆ ಹೊಕ್ಕಿದ್ದ ನಾಗರಹಾವು : ವಿಷಕಾರಿ ಸರ್ಪದಿಂದ ಮನೆಯವರನ್ನು ಕಾಪಾಡಿದ ಬೆಕ್ಕುಗಳು