ಪ್ರವಾಸಕ್ಕೆ ಬಂದು ಕಾವೇರಿ ನಡುಗಡ್ಡೆಯಲ್ಲಿ ಸಿಲುಕಿದ ಕುಟುಂಬ: ಸ್ಥಳೀಯರಿಂದ ರಕ್ಷಣೆ - ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ
ಚಾಮರಾಜನಗರ:ಆರಂಭದಲ್ಲಿ ಮಂಕಾಗಿದ್ದ ಮುಂಗಾರು ಮಳೆ ಬಳಿಕ ರಾಜ್ಯಾದ್ಯಂತ ಬಿರುಸು ಪಡೆದಿದೆ. ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ನಡುವೆ ಪ್ರವಾಸಕ್ಕೆ ತೆರಳಿದ್ದ ಕುಟುಂಬವೊಂದು ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರ ಬಳಿಯ ಕಾವೇರಿ ನದಿಯಲ್ಲಿ ಗುರುವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಸ್ಥಳೀಯರು ಹಾಗೂ ತೆಪ್ಪ ಓಡಿಸುವವರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು ಮೂಲದ ಕುಟುಂಬವೊಂದು ಕಾವೇರಿ ನದಿಯ ನಡುಗಡ್ಡೆಗೆ ಪ್ರವಾಸಕ್ಕೆ ತೆರಳಿತ್ತು. ಆದರೆ, ದಿಢೀರ್ ನೀರು ಹೆಚ್ಚಾದ ಕಾರಣ ವಾಪಸ್ ಬರಲಾಗದೇ ಕುಟುಂಬಸ್ಥರು ಕೂಗಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಹಗ್ಗದ ಸಹಾಯದಿಂದ 4 ವರ್ಷದ ಬಾಲಕಿ, 8 ವರ್ಷದ ಬಾಲಕ, ಮೂವರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ರಕ್ಷಿಸಿ ದಡಕ್ಕೆ ಸೇರಿಸಿದ್ದಾರೆ. ಈ ಹಿಂದೆ ಹಲವರು ಇದೇ ರೀತಿ ನೀರಿಗಿಳಿದು ಪ್ರಾಣ ಕಳೆದುಕೊಂಡಿದ್ದರು. ಒಟ್ಟಿನಲ್ಲಿ ಸ್ಥಳೀಯರ ಸಮಯಪ್ರಜ್ಞೆ ಹಾಗೂ ಮಾನವೀಯ ನೆರವಿನಿಂದ ಇಡೀ ಕುಟುಂಬ ಜಲಕಂಟಕದಿಂದ ಪಾರಾಗಿದೆ.
ಇದನ್ನೂ ಓದಿ: ಹಾಸನ: ಮೈದುಂಬಿ ಹರಿಯುತ್ತಿರುವ ಮೂಕನಮನೆ ಜಲಪಾತ.. ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ