ಕೇರಳದಲ್ಲಿ ನಿನ್ನೆ ಮೋದಿ ಚಾಲನೆ ನೀಡಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋರಿಕೆ: ವಿಡಿಯೋ - Vande Bharat Express
ಕಣ್ಣೂರು: ನಿನ್ನೆ ಕೇರಳದ ತಿರುವನಂತಪುರ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎಸಿಯಲ್ಲಿ ಸೋರಿಕೆಯಾಗಿದೆ. ಮೊದಲ ದಿನವೇ ಎಕ್ಸಿಕ್ಯೂಟಿವ್ ಕೋಚ್‌ನ ಎಸಿ ಗ್ರಿಲ್‌ನಲ್ಲಿ ಸೋರಿಕೆ ಕಂಡು ಬಂದಿದೆ. ಕಣ್ಣೂರು ರೈಲು ನಿಲ್ದಾಣದಲ್ಲಿ ನಿಂತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿನ ಸೋರಿಕೆಯನ್ನು ಮುಚ್ಚಲು ಸಿಬ್ಬಂದಿ ಕೆಲಸ ಪ್ರಾರಂಭಿಸಿದ್ದಾರೆ. ರೈಲ್ವೆ ತಾಂತ್ರಿಕ ವಿಭಾಗ ಮತ್ತು ಐಸಿಎಫ್ (ಇಂಟೆಗ್ರಲ್ ಕೋಚ್ ಫ್ಯಾಕ್ಟರಿ) ತಂತ್ರಜ್ಞರು ತಪಾಸಣೆ ನಡೆಸಿದ್ದಾರೆ.
"ಇದು ಮೊದಲ ಸೇವೆಯಾಗಿರುವುದರಿಂದ ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಕೆಲ ದಿನಗಳ ಕಾಲ ಇಂತಹ ತಪಾಸಣೆ ಮುಂದುವರಿಯಲಿದೆ" ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದ್ದಾರೆ. ಕಾಸರಗೋಡು ರೈಲನ್ನು ನಿಲುಗಡೆ ಮಾಡಲು ಯಾವುದೇ ಟ್ರ್ಯಾಕ್ ಇಲ್ಲದ ಕಾರಣ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಕಣ್ಣೂರಿನಲ್ಲಿ ನಿಲುಗಡೆ ಮಾಡಲಾಗಿದೆ. ಆದರೆ, ಸೇವೆಗೆ ಯಾವುದೇ ಅಡ್ಡಿಯಿಲ್ಲ" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ (25-04 -23) ತಿರುವನಂತಪುರದಿಂದ ಮೊದಲ ಸೇವೆ ಆರಂಭಿಸಿದ ವಂದೇ ಭಾರತ್ ಬುಧವಾರ ( ಇಂದು) ಕಾಸರಗೋಡಿನಿಂದ ವಾಪಸಾಗಲಿದೆ. ಮಂಗಳವಾರ ರಾತ್ರಿ ಕಾಸರಗೋಡಿನಿಂದ ಕಣ್ಣೂರಿಗೆ ರೈಲು ಬಂದಿತ್ತು. ಈ ವೇಳೆ, ಮಳೆ ನೀರು ಸೋರಿಕ ಕಂಡುಬಂದಿದ್ದು, ರಿಪೇರಿ ಕಾರ್ಯ ಸಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಯ ನಂತರ ಕಾಸರಗೋಡಿನಿಂದ ಹೊರಡಲಿದೆ. ಅದಕ್ಕೂ ಮುನ್ನ ದುರಸ್ತಿ ಪೂರ್ಣಗೊಳಿಸಿ ಕಣ್ಣೂರಿನಿಂದ ಕಾಸರಗೋಡಿಗೆ ರೈಲು ತರಲಾಗುವುದು.
ಇದನ್ನೂ ಓದಿ :ತಿರುವನಂತಪುರಂ - ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ