ಡಿ.23ಕ್ಕೆ ವೈಕುಂಠ ಏಕಾದಶಿ: ತಿರುಪತಿ ತಿಮ್ಮಪ್ಪನ ವೈಕುಂಠ ದ್ವಾರ ದಾಟಲು ಹರಿದು ಬಂದ ಭಕ್ತಸಾಗರ - ತಿರುಪತಿ ವೈಕುಂಠ ದ್ವಾರ
Published : Dec 22, 2023, 12:31 PM IST
|Updated : Dec 22, 2023, 1:04 PM IST
ತಿರುಪತಿ (ಆಂಧ್ರಪ್ರದೇಶ):ಪ್ರತಿ ವರ್ಷ ಮಾರ್ಗಶಿರ ಮಾಸ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯನ್ನು ವಿಶೇಷ ದಿನವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ. ಇದನ್ನು ಮೋಕ್ಷದ ಏಕಾದಶಿ ಎಂದೂ ಕರೆಯಲಾಗುತ್ತದೆ. ವಿಷ್ಣು ದೇವರಿಗೆ ಪ್ರಿಯವಾದ ಈ ಪವಿತ್ರ ದಿನದಂದು ಮಾಡುವ ಪೂಜೆ-ಪುನಸ್ಕಾರಗಳು ಮತ್ತು ಉಪವಾಸ ವ್ರತಗಳು ವಿಶೇಷ ಫಲವನ್ನು ನೀಡುತ್ತದೆ ಎಂಬುದು ನಂಬಿಕೆ. ಅಲ್ಲದೇ ಈ ದಿನದಂದು ಇಬ್ಬರು ಅಸುರರ ಮೋಕ್ಷಕ್ಕಾಗಿ ತೆರೆದ ವೈಕುಂಠ ದ್ವಾರ ಎಂದು ಈ ದಿನವನ್ನು ಆಚರಿಸಲಾಗುತ್ತದೆ.
ಹಾಗಾಗಿ ಈ ದಿನ ಬಹುತೇಕ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಲಾಗುತ್ತದೆ. ಎಂದಿನಂತೆ ಈ ಬಾರಿಯೂ ಭೂವೈಂಕುಠ ಎಂದೇ ಪ್ರಸಿದ್ಧಿ ಪಡೆದಿರುವ ಆಂಧ್ರಪ್ರದೇಶದ ತಿರುಪತಿ ತಿರುಮಲದಲ್ಲಿ ನಾಳೆಯಿಂದ 10 ದಿನಗಳ ಕಾಲ ವೈಕುಂಠ ದ್ವಾರವನ್ನು ತೆರಯಲಾಗುತ್ತದೆ. ಈ ಪವಿತ್ರವಾದ ದ್ವಾರವನ್ನು ದಾಟಲು ದೇಶದ ಮೂಲೆ ಮೂಲೆಗಳಿಂದ ಭಕ್ತರು ಈಗಾಗಲೇ ತಿರುಮಲೆಗೆ ಆಗಮಿಸುತ್ತಿದ್ದಾರೆ. ನಿಗದಿತ ಸಮಯಕ್ಕೆ ಮೊದಲೇ ತಿರುಪತಿ ಕ್ಷೇತ್ರಕ್ಕೆ ಭಕ್ತರು ಆಗಮಿಸಿದ್ದು, ಕಣ್ಣು ಹಾಯಿಸದ ಕಡೆಯೆಲ್ಲ ಭಕ್ತ ಸಾಗರವೇ ಕಂಡು ಬರುತ್ತಿದೆ.
ಇಂದು ಮಧ್ಯಾಹ್ನ 2 ಗಂಟೆಯಿಂದ ವೆಂಕಟೇಶ್ವರ ಸ್ವಾಮಿ ದರ್ಶನ ಟೋಕನ್ ವಿತರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಗುರುವಾರ ಸಂಜೆ ಟೋಕನ್ ನೀಡುವ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ನಿಯಂತ್ರಿಸಲು ಟಿಟಿಡಿ ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಆಗದ ಕಾರಣ ಗುರುವಾರ ಮಧ್ಯರಾತ್ರಿಯಿಂದಲೇ ಟೋಕನ್ ವಿತರಿಸಲು ಆರಂಭಿಸಲಾಗಿದೆ. ವೈಕುಂಠ ಏಕಾದಶಿ ಮತ್ತು ದ್ವಾದಶಿ ದಿನಗಳಿಗೆ ವಿಶೇಷ ಟಿಕೆಟ್‌ಗಳನ್ನು ತಿರುಮಲ ಕ್ಷೇತ್ರದಲ್ಲಿ ನೀಡಲಾಗುತ್ತದೆ.
ಭೂದೇವಿ ಕಾಂಪ್ಲೆಕ್ಸ್, ಇಂದಿರಾ ಮೈದಾನ, ರಾಮಚಂದ್ರ ಪುಷ್ಕರಿಣಿ, ಜೀವಕೋಣ ಜಿಪಂ ಪ್ರೌಢಶಾಲೆ, ವಿಷ್ಣುನಿವಾಸಂ, ಶ್ರೀನಿವಾಸಂ, ಬೈರಾಗಿ ಪಟ್ಟೇದ ರಾಮನಾಯ್ಡು ಶಾಲೆ, ಶೇಷಾದ್ರಿನಗರದ ಜಿಪಂ ಪ್ರೌಢಶಾಲೆ ಮತ್ತು ತಿರುಪತಿಯ ಗೋವಿಂದರಾಜ ಸ್ವಾಮಿ ಸತ್ರಗಳಲ್ಲಿ ಹತ್ತು ದಿನಗಳ ಕಾಲ ಟೋಕನ್ ವಿತರಿಸಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಬರುವಂತಹ ಭಕ್ತರಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವೈಕುಂಠ ಏಕಾದಶಿ: ಶರವಣ ಚಾರಿಟಬಲ್ ಟ್ರಸ್ಟ್‌ನಿಂದ 1 ಲಕ್ಷ ಲಡ್ಡು ವಿತರಣೆ