ವಿಜಯ ಸಂಕಲ್ಪ ಯಾತ್ರೆಗೆ ಪ್ರತಿಭಟನೆ ಬಿಸಿ: ಗುತ್ತೇದಾರ್ ಸಹೋದರರಿಂದ ಟಿಕೆಟ್ ಪೈಪೋಟಿ - ಮಾಲಿಕಯ್ಯ ಗುತ್ತೆದಾರ
ಕಲಬುರಗಿ :ವಿಜಯ ಸಂಕಲ್ಪ ಯಾತ್ರೆಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಅಫಜಲಪುರದಲ್ಲಿ ಬಿ. ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯ ರೋಡ್ ಶೋ ವೇಳೆ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿ ಕೋಲಿ ಕಬ್ಬಲಿಗ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ.
ಕೋಲಿ ಹಾಗೂ ಕಬ್ಬಲಿಗ ಸಮಾಜವನ್ನು ಎಸ್‌ಟಿ ಗೆ ಸೇರಿಸುತ್ತೇವೆ ಎಂದು ಹೇಳಿದ್ದ ಸರ್ಕಾರ ಕೊಟ್ಟ ಮಾತು ತಪ್ಪಿದೆ ಎಂದು ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಕಳೆದ ಚುನಾವಣೆ ವೇಳೆ ಎಸ್ಟಿ ಸೇರಿಸುವ ಭರವಸೆ ನೀಡಿದ ಬಿಜೆಪಿ ಈ ಬಾರಿಯ ಚುನಾವಣೆಗೆ ಸಿದ್ಧತೆ ನಡೆದರೂ ಎಸ್ಟಿಗೆ ಸೇರಿಸದೇ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ಮತ ಪಡೆಯಲು ಸುಳ್ಳು ಆಶ್ವಾಸನೆ ನೀಡಿ ಈಗ ಕೊಟ್ಟ ಮಾತು ತಪ್ಪಿದೆ ಅಂತ ಕಿಡಿಕಾರಿದರು. ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು. ಬಿಜೆಪಿ ವಿಜಯ ಸಂಕಲ್ಪಯಾತ್ರೆ ರೋಡ್ ಶೋ ವೇಳೆ ಪ್ರತಿಭಟನೆ ನಡೆಸಿದ್ದರಿಂದ ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಅಣ್ತಮ್ಮಾಸ್ ಪೈಪೋಟಿ : ಅಫಜಲಪುರ ಮತಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಗುತ್ತೇದಾರ ಸಹೋದರರ ಮದ್ಯೆ ಬಿರುಸಿನ ಫೈಟ್ ನಡೆದಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆದ ಮಾಲಿಕಯ್ಯ ಗುತ್ತೇದಾರ ಹಾಗೂ ಇವರ ಕಿರಿಯ ಸಹೋದರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಿತೀನ್ ಗುತ್ತೆದಾರ ಮದ್ಯೆ ಬಿಜೆಪಿ ಟಿಕೆಟ್ಗಾಗಿ ಬಿರುಸಿನ ಪೈಪೋಟಿ ನಡೆದಿದ್ದು, ಮಾಜಿ ಸಿಎಂ ಯಡಿಯುರಪ್ಪರನ್ನೂ ಸ್ವಾಗತ ಕೋರಿ ಇಬ್ಬರು ನಾಯಕರು ಪ್ರತ್ಯೇಕವಾದ ಬ್ಯಾನರ್ , ಕಟ್ಔಟ್ ಮೂಲಕ ಸ್ವಾಗತ ಕೋರಿ ಗಮನ ಸೆಳೆದಿದ್ದಾರೆ.
ಆರು ಬಾರಿ ಶಾಸಕರಾಗಿ ಸಚಿವರಾಗಿದ್ದ ಮಾಲಿಕಯ್ಯ ಗುತ್ತೇದಾರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲು ಪ್ರಯತ್ನ ಮಾಡ್ತಿದ್ದಾರೆ. ಕ್ಷೇತ್ರದ ಜನ ಇದೊಂದು ಬಾರಿ ಸ್ಪರ್ಧೆ ಮಾಡುವಂತೆ ಕೋರುತ್ತಿದ್ದಾರೆ. ಹೀಗಾಗಿ ಕೊನೆಯ ಬಾರಿಗೆ ಇದೊಂದು ಚುನಾವಣೆ ಸ್ಪರ್ಧಿಸುವುದಾಗಿ ಮಾಲಿಕಯ್ಯ ಗುತ್ತೇದಾರ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಶಾಸಕನಾಗಿ ಸಚಿವರಾಗಿ ಸೇವೆ ಮಾಡಿದ್ದೀರಿ ಈ ಬಾರಿ ನನಗೆ ಅವಕಾಶ ಕೊಡಿ ಅಂತ ಸಹೋದರ ನಿತೀನ್ ಗುತ್ತೇದಾರ ಮನವಿ ಮಾಡಿದ್ದಾರೆ.
ಇದನ್ನೂ ಓದಿ :ಮುಳಗಡೆ ನಗರಿ ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವಿಶೇಷ