ಕನ್ನಾಳ ಗುಡ್ಡದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ: ಗ್ರಾಮಸ್ಥರು ನಿರಾಳ - ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಸಿಬ್ಬಂದಿ
ಕುಷ್ಟಗಿ ತಾಲೂಕಿನ ಕನ್ನಾಳ ಗುಡ್ಡದಲ್ಲಿ ಶನಿವಾರ ರಾತ್ರಿ ನಾಲ್ಕು ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ. ನಾಲ್ಕೈದು ದಿನಗಳಿಂದ ಕನ್ನಾಳ ಗುಡ್ಡದ ಪ್ರದೇಶದಲ್ಲಿ ಓಡಾಡುತ್ತಿದ್ದ ಚಿರತೆ ಹೆಜ್ಜೆ ಗುರುತು ಪತ್ತೆ ಹಚ್ಚಿದ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಸಿಬ್ಬಂದಿ, ಬೋನ್ ಇಡಲು ಸಿದ್ಧತೆ ಮಾಡಿಕೊಂಡಿದ್ದರು. ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಈಗ ಇಲಾಖೆ ಇಟ್ಟ ಬೋನಿನಲ್ಲಿ ಸೆರೆಯಾಗಿದೆ. ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸುವ ಬಗ್ಗೆ ಮಾಹಿತಿ ಇದೆ. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ, ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗಣಿ, ಹನುಮಂತಪ್ಪ, ಅರಣ್ಯ ಗಸ್ತು ಅಧಿಕಾರಿ ಮಹಾಂತೇಶ ರಡ್ಡೇರ್, ಸ್ಥಳೀಯರಾದ ಸಂತೋಷ ಸರನಾಡಗೌಡರು ಮತ್ತಿತರರು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು. ಸಂತೋಷ ಸರನಾಡಗೌಡ್ರು ಪ್ರತಿಕ್ರಿಯಿಸಿ, ಕಳೆದ ನಾಲ್ಕು ದಿನಗಳ ಹಿಂದೆ ಕನ್ನಾಳ ಗುಡ್ಡದಲ್ಲಿ ಚಿರತೆ ಕಂಡು ಬಂದಿತ್ತು. ಆದರೆ ಗುಡ್ಡ ಬಿಟ್ಟು ಇಳಿದಿರಲಿಲ್ಲ. ಶನಿವಾರ ಆಹಾರಕ್ಕಾಗಿ ಕೆಳಗೆ ಇಳಿದು ಬಂದು ಬೋನಿನಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ:ವಿದ್ಯಾರ್ಥಿಯನ್ನು ಬಲಿ ಪಡೆದಿದ್ದ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಜನ...