ಜಲಾವೃತವಾದ ದೆಹಲಿಯ ರಾಜ್‌ಘಾಟ್: ಡ್ರೋನ್ ಕ್ಯಾಮರಾದಲ್ಲಿ ದೃಶ್ಯ ಸೆರೆ - ಡ್ರೋನ್ ಕ್ಯಾಮರಾದಲ್ಲಿ ದೃಶ್ಯ ಸೆರೆ
ನವದೆಹಲಿ: ಯಮುನಾ ನದಿಯ ನೀರಿನ ಮಟ್ಟ ಇಳಿಮುಖವಾಗುತ್ತಿದ್ದರೂ ಸಹ ರಾಷ್ಟ್ರ ರಾಜಧಾನಿಯ ಹಲವು ಭಾಗಗಳು ಇನ್ನೂ ಜಲಾವೃತವಾಗಿವೆ. ಭಾರಿ ಮಳೆಯ ಬಳಿಕ ಉಂಟಾದ ಪ್ರವಾಹ ಸ್ಥಿತಿಯು 9 ದಿನಗಳ ಬಳಿಕ ಇಳಿಮುಖವಾಗುತ್ತಿದ್ದು, ಇಂದು ಬೆಳಗ್ಗೆ 6 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟ 205.25 ಮೀಟರ್ ದಾಖಲಾಗಿದೆ. ಆದಾಗ್ಯೂ, ರಾಜ್‌ಘಾಟ್‌ನ ಕೆಲವು ಪ್ರದೇಶಗಳು ನೀರಿನಿಂದ ಆವೃತವಾಗಿದ್ದು, ಡ್ರೋನ್ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಶುಕ್ರವಾರದಂದು ಯಮುನೆ ದಾಖಲೆಯ 208.66 ಮೀಟರ್ ಎತ್ತರಕ್ಕೆ ತಲುಪಿದ ನಂತರ ಸೋಮವಾರ ಬೆಳಗ್ಗೆ 7 ಗಂಟೆಗೆ 205.45 ಮೀಟರ್‌ಗೆ ಇಳಿದಿತ್ತು. ಬಳಿಕ, ಮತ್ತೆ ಸೋಮವಾರ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿತ್ತು. ಮಂಗಳವಾರ ನೀರಿನ ಮಟ್ಟ ಕಡಿಮೆಯಾಗಿದ್ದು, ಬುಧವಾರ ಬೆಳಗ್ಗೆ ಅಪಾಯದ ಮಟ್ಟಕ್ಕಿಂತ ಕೆಳಕ್ಕೆ ತಲುಪಿದೆ. ಆದರೆ, ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆ ಮುಂದುವರೆಯುವ ಎಚ್ಚರಿಕೆ ನೀಡಲಾಗಿದೆ. ಪರ್ವತ ಪ್ರದೇಶಗಳಲ್ಲಿ ಮಳೆಯಾದರೆ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ.
ಈ ವರ್ಷ ಸಂಭವಿಸಿರುವ ಯಮುನಾ ನದಿ ಪ್ರವಾಹವು ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಹೊರವರ್ತುಲ ರಸ್ತೆ ಸೇರಿ ವಸತಿ ಕಾಲೋನಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಸಿವಿಲ್ ಲೈನ್ನ ಹಲವು ಕಾಲೋನಿಗಳು ಮುಳುಗಡೆಯಾಗಿವೆ. ಅಷ್ಟೇ ಅಲ್ಲದೆ, ಪ್ರವಾಹದ ನೀರು ಐಟಿಒ ಕೆಂಪು ಕೋಟೆಯವರೆಗೂ ತಲುಪಿತ್ತು. ಪ್ರವಾಹಕ್ಕೆ ನಲುಗಿದ ಸಾವಿರಾರು ಮಂದಿ ಪರಿಹಾರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ :ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಕೆ: ರಾಷ್ಟ್ರ ರಾಜಧಾನಿಗೆ ಮುಗಿಯದ ಪ್ರವಾಹ ಭೀತಿ