ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ 30 ಕೋಟಿ ಖರ್ಚು: ಡಿ ಕೆ ಸುರೇಶ್ ಆರೋಪ - ಮೋದಿ ಹೆಸರಲ್ಲಿ ರಾಜ್ಯ ಬಿಜೆಪಿಯಿಂದ ಕೋಟ್ಯಂತರ ಡೀಲ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಬಿಜೆಪಿಯವರು ಕೋಟ್ಯಂತರ ಡೀಲ್ ನಡೆಸುತ್ತಿದ್ದು, ಕರ್ನಾಟಕದಲ್ಲಿ ಬಿಜೆಪಿಯವರಿಂದ ಪ್ರಧಾನಿ ಮೋದಿ ಟೂರ್ ಡೀಲ್ ನಡೆಯುತ್ತಿದೆ. ಏರ್ ಪೋರ್ಟ್ ಬಳಿಯ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಬಿಜೆಪಿಯವರು 30 ಕೋಟಿ ಖರ್ಚು ಮಾಡಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ಆರೋಪಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಪಿಎಂ ಮೋದಿ 7 ಬಾರಿ ಬಂದಿದ್ದಾರೆ. ರಾಜ್ಯದಲ್ಲಿ ಪ್ರಧಾನಿ ಮೋದಿ ಪ್ರವಾಸದ ಹೆಸರಿನಲ್ಲಿ 40% ಅಲ್ಲ ಬದಲಾಗಿ 200% ಡೀಲ್ ನಡೆಯುತ್ತಿದೆ. ಪ್ರಧಾನಿ ಹೆಸರನ್ನು ಇಟ್ಟುಕೊಂಡು ಬಿಜೆಪಿ ಡೀಲ್ ಮಾಡುತ್ತಿದೆ. ನವೆಂಬರ್ನಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಪ್ರಧಾನಿ ಮೋದಿ ಬಂದಿದ್ದರು. ಕೆಂಪೇಗೌಡರ ಮೇಲೆ ಗೌರವ ಇಟ್ಟು ಉದ್ಘಾಟಿಸಿದ್ದಾರೆ ಅಂದುಕೊಂಡಿದ್ದೆವು. ಆದರೆ ಕೆಂಪೇಗೌಡರ ಹೆಸರಿನಲ್ಲಿ ಡೀಲ್ ಮಾಡುತ್ತಿದ್ದಾರೆ. ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ 30 ಕೋಟಿ ಬಿಲ್ ಮಾಡಿದ್ದಾರೆ. ಏರ್ ಪೋರ್ಟ್ ರಸ್ತೆಗೆ 8.36 ಕೋಟಿ ಖರ್ಚು ಮಾಡಿದ್ದಾರೆ. ಆದರೆ ಅಲ್ಲಿನ ರಸ್ತೆ ಏರ್ ಪೋರ್ಟ್ ಅಥಾರಿಟಿ ವ್ಯಾಪ್ತಿಗೆ ಬರುತ್ತದೆ. ಪಿಎಂ ಆ ರಸ್ತೆಯಲ್ಲಿ ಓಡಾಟ ನಡೆಸಿಲ್ಲ. ಹಾಗಾದರೆ ರಸ್ತೆ ರಿಪೇರಿ ಏಕೆ? ಪ್ರತಿಮೆ ಇರುವ ಸ್ಥಳ ಮಾತ್ರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಏರ್ಪೋರ್ಟ್ ರಸ್ತೆ ಗುಂಡಿ ಬಿದ್ದಿತ್ತಾ? ರಿಪೇರಿ ಎಲ್ಲಿ ಬಂತು ಎಂದು ಪ್ರಶ್ನಿಸಿದರು.
ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕಲು 12 ಕೋಟಿ ಖರ್ಚು ಮಾಡಿದ್ದಾರೆ. ಈ ಮೊತ್ತದಲ್ಲಿ ಎರಡು ಸೆಟ್ ಪೆಂಡಾಲ್ ಖರೀದಿ ಮಾಡಬಹುದಿತ್ತು. ನೀರು ಬಾಟಲ್ಗೆ 1 ಕೋಟಿ ಖರ್ಚು ಮಾಡಿದ್ದಾರೆ. ಬಂದ ಜನರಿಗೆ ನೀರು ಕೊಡೋದಕ್ಕೆ 1 ಕೋಟಿ ಖರ್ಚು ತೋರಿಸಿದ್ದಾರೆ. ಒಬ್ಬೊಬ್ಬರು ಎಷ್ಟೆಷ್ಟು ಲೀಟರ್ ನೀರು ಕುಡಿದಿದ್ದಾರೆ. 10 ಲಕ್ಷ ಜನ ಸೇರಿದ್ದರೆ 1 ಕೋಟಿ ಆಗಬೇಕು. ಎಷ್ಟು ಜನ ಸೇರಿದ್ರು? ಎಷ್ಟು ನೀರು ಖರ್ಚಾಯ್ತು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇಲ್ಲ, ಬಿಜೆಪಿಗರನ್ನು ಕರೆದು ಟಿಕೆಟ್ ಕೊಡ್ತೀವಿ ಅಂತಿದ್ದಾರೆ: ಯತ್ನಾಳ್