ಹಾವೇರಿ: ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಡ.. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು - etv bharat kannada
ಹಾವೇರಿ:ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಂಗಳವಾರ ನಡೆದ ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿ ಅಗ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಬುಧವಾರ ಸಾವನ್ನಪ್ಪಿದ್ದಾರೆ. ಮೃತನನ್ನು 36 ವರ್ಷದ ಶಂಭು ದ್ಯಾಮನಗೌಡ್ರು ಎಂದು ಗುರುತಿಸಲಾಗಿದೆ. ಮಂಗಳವಾರ ರಾಣೆಬೆನ್ನೂರಿನ ಮಾರುತಿ ನಗರದಲ್ಲಿದ್ದ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಘಟನೆಯಲ್ಲಿ ಶಂಭು ಸೇರಿದಂತೆ ಶಿಲ್ಪಾ ಮತ್ತು ಮಂಗಳಾ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಂಭು ಬುಧವಾರ ಸಾವನ್ನಪ್ಪಿದ್ದಾರೆ. ಶಂಭು ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದವರು. ತೀವ್ರ ಗಾಯಗೊಂಡಿರುವ ಮೋಟೆಬೆನ್ನೂರು ಗ್ರಾಮದವರಾದ ಶಿಲ್ಪಾ ಬನ್ನಿಹಟ್ಟಿ ಮತ್ತು ಮಂಗಳಾ ಎಂಬುವರನ್ನು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಮಧ್ಯೆ ಯಾವುದೇ ಪೂರ್ವಾನುಮತಿ ಇಲ್ಲದೆ ಸ್ಪಾರ್ಕ್ ಕ್ಯಾಂಡಲ್ ತಯಾರಿಸುತ್ತಿದ್ದ ಘಟಕದ ಮಾಲೀಕ ಶ್ರೀಕಾಂತ ತಿಮ್ಮಾಪುರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ಶ್ರೀಕಾಂತ ತಿಮ್ಮಾಪುರ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಮೃತ ಶಂಭು ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲದೆ, ಮಾಲೀಕನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಏಕಾಏಕಿ ಹೊತ್ತಿ ಉರಿದ ಎಲೆಕ್ಟ್ರಿಕಲ್ ಬೈಕ್.. ವಿಡಿಯೋ.