ಬಸ್ಗೆ ಸಿಲುಕಿದ ಬೈಕನ್ನು 90ರ ವೇಗದಲ್ಲಿ 12 ಕಿಮೀ ಎಳೆದೊಯ್ದ ಚಾಲಕ: ವಿಡಿಯೋ
ಇಟಾ(ಉತ್ತರಪ್ರದೇಶ):ಹಿಟ್ ಅಂಡ್ ರನ್ ಕೇಸ್ಗಳು ಈ ಮಧ್ಯೆ ಹೆಚ್ಚಾಗುತ್ತಲೇ ಸಾಗಿವೆ. ಅಷ್ಟೇ ಅಲ್ಲ ಪ್ರಾಣವನ್ನು ಬಲಿ ತೆಗೆದುಕೊಂಡಿದ್ದಲ್ಲದೇ, ವಾಹನವನ್ನು ಸುಮಾರು ಕಿಲೋ ಮೀಟರ್ಗಟ್ಟಲೇ ಎಳೆದೊಯ್ದ ಘಟನೆಗಳೂ ನಡೆದಿವೆ. ಅಂಥದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಇಟಾ ಜಿಲ್ಲೆಯಲ್ಲಿ ರಾತ್ರಿ 2 ಗಂಟೆಗೆ ಬೈಕ್ಗೆ ಬಸ್ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದಾನೆ. ಘಟನೆಯಿಂದ ಬೆದರಿದ ಬಸ್ ಚಾಲಕ ಅತಿ ವೇಗವಾಗಿ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಅಪಘಾತದ ವೇಳೆ ಬಸ್ ಬಾನೆಟ್ಗೆ ಬೈಕ್ ಸಿಕ್ಕಿಹಾಕಿಕೊಂಡಿದ್ದು, ಅದನ್ನು ಸುಮಾರು 12 ಕಿಮೀ ದೂರ ಅದೇ ಸ್ಥಿತಿಯಲ್ಲಿ ಚಲಾಯಿಸಿಕೊಂಡು ಬಂದಿದ್ದಾನೆ. ಇದನ್ನು ಇನ್ನೊಬ್ಬ ಬೈಕ್ ಸವಾರರು ವಿಡಿಯೋ ಮಾಡಿದ್ದು, ವೈರಲ್ ಆಗಿದೆ.
ಇಟಾದಿಂದ ದೆಹಲಿಗೆ ತೆರಳುತ್ತಿದ್ದ ಬಸ್ ಬೈಕ್ ಸವಾರ ವಿಕಾಸ್ (25) ಎಂಬಾತನ ಮೇಲೆ ಹರಿದಿದೆ. ಇದರಿಂದ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಬಸ್ ಬಾನೆಟ್ನೊಳಕ್ಕೆ ಸಿಲುಕಿತ್ತು. ಭಯದಿಂದ ಬಸ್ ಚಾಲಕ ಬೈಕ್ ಸಮೇತ 90 ಕಿ.ಮೀ ವೇಗದಲ್ಲಿ ಓಡಿಸಿಕೊಂಡು ಹೋಗಿದ್ದಾನೆ. ಬೈಕ್ ಬಸ್ಸಿನ ಮುಂಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದರ ಬಗ್ಗೆ ಜನರು ಹೇಳಿದರೂ ಕೇಳದ ಚಾಲಕ ಬಸ್ 90 ಕಿಮೀ ವೇಗದಲ್ಲಿ ಓಡಿಸಿಕೊಂಡು ಹೋಗಿದ್ದಾನೆ.
ದಾರಿಹೋಕರು ಇದನ್ನು ವಿಡಿಯೋ ಮಾಡಿದ್ದಾರೆ. ಬಳಿಕ ಅದೇ ಮಾರ್ಗದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಮುಂದಿನ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸುಮಾರು 12 ಕಿಲೋಮೀಟರ್ ದೂರು ಸಾಗಿ ಬಂದ ಬಸ್ಸನ್ನು ಪೊಲೀಸರು ತಡೆದು ಚಾಲಕನ್ನು ಬಂಧಿಸಿದ್ದಾರೆ.
ಓದಿ:ಗ್ರಾಮಕ್ಕೆ ನುಗ್ಗಿ ಮಹಿಳೆ ಮೇಲೆ ದಾಳಿ ನಡೆಸಿದ್ದ ಹುಲಿ ಸೆರೆ: ವಿಡಿಯೋ