ಸವಣೂರಲ್ಲಿ ಧರೆಗುರುಳಿದ ಪ್ರಾಚೀನ ಕಾಲದ ಹುಣಸೆ ಮರ.. - ಪ್ರಾಚೀನ ಕಾಲದ ಹುಣಸೆ ಮರ
ಹಾವೇರಿ:ಜಿಲ್ಲೆ ಸವಣೂರು ಪಟ್ಟಣದಲ್ಲಿರುವ ಪ್ರಾಚೀನ ಕಾಲದ ಹುಣಸೆ ಮರ ಧರೆಗೆ ಉರುಳಿ ಬಿದ್ದಿದೆ. ಸವಣೂರಿನ ದೊಡ್ಡ ಹುಣಸಿಕಲ್ಮಠದ ಆವರಣದಲ್ಲಿರುವ ಮೂರು ಹುಣಸೆ ಮರಗಳಲ್ಲಿ ಒಂದು ಮರ ಉರುಳಿ ಬಿದ್ದಿದೆ. ಈ ಮೂರು ಮರಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಸಾವಿರಾರು ವರ್ಷಗಳ ಹಿಂದೆ ಘೋರಕನಾಥ್ ತಪಸ್ವಿಗಳು ಈ ಮೂರು ಮರಗಳನ್ನು ನೆಟ್ಟಿದ್ದರು. ಆನೆಹುಣಸೆ, ದೊಡ್ಡಹುಣಸೆ ಎಂದು ಕರೆಯುತ್ತಿದ್ದ ಈ ಮರಗಳಲ್ಲಿ ಭಕ್ತರು ದೈವಿಶಕ್ತಿಯನ್ನ ಕಂಡಿದ್ದರು. ಈ ಮರಕ್ಕೆ ಹೊಂದಿಕೊಂಡಂತೆ ಇರುವ ಮಠಕ್ಕೆ ದೊಡ್ಡ ಹುಣಸಿಮಠ ಎಂದು ಕರೆಯಲಾಗಿತ್ತು. ಈ ಮರಗಳಲ್ಲಿ ಔಷಧಿಯ ಗುಣಗಳಿದ್ದು, ವರ್ಷಕ್ಕೆ ಲಕ್ಷಾಂತರ ಭಕ್ತರು ಈ ಮರಗಳ ವೀಕ್ಷಣೆಗಾಗಿ ಸವಣೂರಿಗೆ ಬರುತ್ತಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳು ಮರವನ್ನು ಯಥಾವತ್ತಾಗಿ ಮರುನೆಡಲು ಚಿಂತನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶನಿವಾರ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ತಜ್ಞರು ಭೇಟಿ ನೀಡಲಿದ್ದಾರೆ. ದೊಡ್ಡ ಹುಣಸೆ ಮರ ಕೇವಲ ಮರವಾಗದೇ ನಮ್ಮಮಠದ ಅವಿಭಾಜ್ಯ ಅಂಗವಾಗಿತ್ತು. ಅನೇಕ ಭಕ್ತರು ಇದರಲ್ಲಿ ದೈವಿಶಕ್ತಿ ಕಂಡಿದ್ದರು. ಮರ ಧರೆಗೆ ಉರುಳಿದ್ದು, ದೊಡ್ಡ ನಷ್ಟವಾಗಿದೆ ಎಂದು ದೊಡ್ಡಹುಣಸಿಕಲ್ಮಠ ಚೆನ್ನಬಸವಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಆಫ್ರಿಕಾ ಮೂಲದ ಈ ವೃಕ್ಷಗಳು ಸಾವಿರಾರು ವರ್ಷಗಳ ಹಿಂದೆಯೇ ಇಲ್ಲಿ ಹುಟ್ಟಿದ್ದು, ಭಕ್ತರನ್ನು ಆಕರ್ಷಿಸುತ್ತಿದ್ದವು.