ಮಲಗಿದ್ದ ಬೀದಿನಾಯಿ ಮೇಲೆ ಕಾರು ಹತ್ತಿಸಿದ್ದ ಕಾರು ಚಾಲಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಜ್ಞಾನಭಾರತಿ ಪೊಲೀಸ್ ಠಾಣಾ
ಬೆಂಗಳೂರು: ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿ ಮೇಲೆ ಕಾರು ಹತ್ತಿಸಿರುವ ಅಮಾನವೀಯ ಘಟನೆ ರಾಜಧಾನಿಯಲ್ಲಿ ನಡೆದಿದೆ. ಕಳೆದ 7ರಂದು ಬೆಳಗ್ಗೆ ಮುತ್ತುರಾಯನಗರದ ಸಪ್ತಗಿರಿ ರೆಸಿಡೆನ್ಸಿ ಮುಂಭಾಗದ ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿದ್ದಾನೆ. ಕಾರು ಮೈಮೇಲೆ ಹತ್ತುತ್ತಿದ್ದಂತೆ ನಡು ರಸ್ತೆಯಲ್ಲೇ ನಾಯಿ ಕುಂಟುತ್ತ ಚಡಪಡಿಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. KA 05 MP 5836 ಎಂಬ ನಂಬರಿನ ಕಾರು ನಾಯಿ ಮೇಲೆ ಹತ್ತಿಸಿದ್ದ ಸಂಬಂಧ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಚಾಲಕನಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ, ಕಳೆದ ವರ್ಷ ಜನವರಿ 26ರಂದು ಸಂಜೆ 6.15ರಲ್ಲಿ ಜಯನಗರ 1ನೇ ಬ್ಲಾಕ್ 10ನ ಮುಖ್ಯರಸ್ತೆಯ ಮನೆ ಎದುರಿನ ಪಾದಚಾರಿ ಮಾರ್ಗದ ಪಕ್ಕದಲ್ಲಿ ಬೀದಿ ನಾಯಿ ಲಾರಾ ಹೆಸರಿನ ಶ್ವಾನ ಮಲಗಿತ್ತು. ಈ ವೇಳೆ, ಉದ್ಯಮಿ ಆದಿಕೇಶವುಲು ಮೊಮ್ಮಗ ಆದಿ ಬಿಳಿ ಬಣ್ಣದ ಆಡಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು, ಮಲಗಿದ್ದ ಬೀದಿ ನಾಯಿ ಮೇಲೆ ಹತ್ತಿಸಿ ಸಾಯಿಸಲು ಯತ್ನಿಸಿದ್ದರು. ಈ ಸಂಬಂಧ ಉದ್ಯಮಿ ದಿ. ಆದಿಕೇಶವಲು ಮೊಮ್ಮಗ ಆದಿ ಎಂಬುವನನ್ನು ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಸಿದ್ದಾಪುರ ಪೊಲೀಸರು ಬಿಟ್ಟುಕಳುಹಿಸಿದ್ದರು. ಗಂಭೀರ ಗಾಯಗೊಂಡಿದ್ದ ಲಾರಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿತ್ತು.
Last Updated : Feb 3, 2023, 8:38 PM IST