ಜೀನಿವಾ: ಸೂರ್ಯನಿಗೆ ನೇರವಾಗಿ ಮೈಯೊಡ್ಡಿ ಕೆಲಸ ಮಾಡುವ ಪ್ರತಿ ಮೂರರಲ್ಲಿ ಒಬ್ಬರು ಮೆಲೊನೊಮಾ ಚರ್ಮದ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ಒ) ಜಂಟಿಯಾಗಿ ಅಂದಾಜಿಸಿದೆ.
ಜರ್ನಲ್ ಎನ್ವರಿನಾಮೆಂಟ್ ಇಂಟರ್ನ್ಯಾಷನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುವವಲ್ಲಿ ಮೆಲೊನೊಮ ಹೊರತಾದ ಚರ್ಮದ ಕ್ಯಾನ್ಸರ್ ಹೆಚ್ಚಳದ ಅಪಾಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇಂತಹ ಕೆಲಸದ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ರಕ್ಷಣೆಗೆ ತುರ್ತು ಕ್ರಮ ನಡೆಸಬೇಕಿದೆ ಎಂದು ತಿಳಿಸಿದೆ.
ಸುಮಾರು 1.6 ಬಿಲಿಯನ್ ಮಂದಿ (15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು) ಸೂರ್ಯನ ನೇರಳಾತೀತ ಕಿರಣಗಳಿಗೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ಈ ಕಿರಣಕ್ಕೆ ಒಳಗಾಗುವಿಕೆ ಸಂಖ್ಯೆ ಹೆಚ್ಚಿದೆ. ಇದೇ ವರ್ಷ 183 ದೇಶದದಲ್ಲಿ ಈ ಮೆಲನೊಮ ಹೊರತಾದ ಚರ್ಮದ ಕ್ಯಾನ್ಸರ್ನಿಂದಾಗಿ 18,960 ಮಂದಿ ಸಾವನ್ನಪ್ಪಿದ್ದಾರೆ. 2000ದಲ್ಲಿ ಈ ಸಾವಿನ ಸಂಖ್ಯೆ 10,088 ಇತ್ತು. ಅಂದರೆ ಶೇ 88ರಷ್ಟು ಅಧಿಕವಾಗಿದೆ ಎಂದು ವರದಿ ತಿಳಿಸಿದೆ.
ಜಾಗತಿಕವಾಗಿ ಕ್ಯಾನ್ಸರ್ ಸಾವಿನಲ್ಲಿ ಸೂರ್ಯನ ನೇರಳಾತೀತ ಕಿರಣದ ಕ್ಯಾನ್ಸರ್ ಪ್ರಕರಣಗಳ ಕೊಡುಗೆ ಮೂರನೇ ಸ್ಥಾನದಲ್ಲಿದೆ. ಕೆಲಸದ ಸ್ಥಳಗಳಲ್ಲಿ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆಗೆ ಯಾವುದೇ ಸುರಕ್ಷತೆ ಇಲ್ಲದೇ ಇರುವುದು ಚರ್ಮದ ಕ್ಯಾನ್ಸರ್ ಅಭಿವೃದ್ಧಿಗೆ ಕಾರಣವಾಗುತ್ತಿದೆ ಎಂದು ಡಬ್ಲ್ಯೂಎಚ್ಒ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಡೊನೊಮ್ ಗೇಬ್ರಿಯಸ್ ಹೇಳಿದ್ದಾರೆ.