ಕರ್ನಾಟಕ

karnataka

ETV Bharat / sukhibhava

ಡಿಸೆಂಬರ್​ ಒಂದೇ ತಿಂಗಳಲ್ಲಿ ಕೋವಿಡ್​ನಿಂದ 10 ಸಾವಿರ ಮಂದಿ ಸಾವು: WHO

ಹವಾಮಾನ ಬದಲಾವಣೆ ಮತ್ತು ಹೊಸ ಸೋಂಕಿನ ಉಪತಳಿಯಿಂದ ಡಿಸೆಂಬರ್​ನಲ್ಲಿ ಜಾಗತಿಕವಾಗಿ ಕೋವಿಡ್​ ಸೋಂಕು ಹೆಚ್ಚಳ ಕಂಡಿದೆ.

By ETV Bharat Karnataka Team

Published : Jan 11, 2024, 11:41 AM IST

10,000 deaths from Covid19 reported in December
10,000 deaths from Covid19 reported in December

ಜಿನೀವಾ: ಡಿಸೆಂಬರ್​ ತಿಂಗಳಲ್ಲಿ ರಜೆಗಳಿಂದಾಗಿ ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನ ಸೇರುವಿಕೆ ಮತ್ತು ಸೋಂಕಿನ ಹೊಸ ತಳಿ ಜೆಎನ್​.1ನಿಂದಾಗಿ ಜಾಗತಿಕವಾಗಿ ಕೋವಿಡ್​ 19 ಹರಡುವಿಕೆ ಪ್ರಮಾಣ ಹೆಚ್ಚಾಯಿತು ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೇಬ್ರೆಯೆಸಸ್ ತಿಳಿಸಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದಾಗ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಶೇ.42ರಷ್ಟು ಮತ್ತು ಐಸಿಯು ದಾಖಲಾತಿ ಶೇ.62ರಷ್ಟು ಏರಿಕೆಯಾಗಿದೆ ಎಂದು ಮಾಧ್ಯಮಗಳಿಗೆ ಅವರು ವಿವರಣೆ ನೀಡಿದರು. ಕೋವಿಡ್​ ಏರಿಕೆಯ ಕುರಿತು ಶೇ.50ಕ್ಕಿಂತ ಕಡಿಮೆ ದೇಶಗಳು ದತ್ತಾಂಶ ಹಂಚಿಕೊಂಡಿದ್ದು, ಅದರ ಮಾಹಿತಿ ಪ್ರಕಟಗೊಂಡಿದೆ. ಯುರೋಪ್​, ಅಮೆರಿಕ ಹೊರತಾಗಿ ಇತರೆ ದೇಶದಲ್ಲಿ ಕೂಡ ಕೋವಿಡ್​ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಇವುಗಳು ವರದಿಯಾಗಿಲ್ಲ ಎಂದು ಕ್ಸಿನುವಾ ಸಂಸ್ಥೆ ವರದಿ ಮಾಡಿದೆ.

ಆದಾಗ್ಯೂ, ಕೋವಿಡ್​ ಇನ್ಮುಂದೆ ಜಾಗತಿಕ ತುರ್ತು ಪರಿಸ್ಥಿತಿಯಾಗಿ ಉಳಿದಿಲ್ಲ. ಆದರೂ ವೈರಸ್​​ ಇಂದಿಗೂ ಪ್ರಸರಣ ಕಾಣುತ್ತಿದೆ. ಸೋಂಕು ಬದಲಾಗುತ್ತಿದ್ದು, ಜನಜೀವನಕ್ಕೆ ಅಪಾಯ ಒಡ್ಡುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಡಬ್ಲ್ಯೂಎಚ್​ಒನ ಕೋವಿಡ್​ ತಾಂತ್ರಿಕ ಮುಖ್ಯಸ್ಥ ಮರಿಯಾ ವಾನ್​ ಕೆರ್ಕೊವ್​​ ಮಾತನಾಡಿ, ಕೋವಿಡ್ ವೈರಸ್​ನಿಂದಾಗಿ ಜಾಗತಿಕವಾಗಿ ಜ್ವರ, ರೈನೊವೈರಸ್​ ಮತ್ತು ನ್ಯೂಮೋನಿಯಾ ಸೇರಿದಂತೆ ಶ್ವಾಸಕೋಶದ ರೋಗಗಳ ಏರಿಕೆಯಾಗಿದೆ. ಈ ಸೋಂಕಿನ ಹರಡುವಿಕೆ ಜನವರಿವರೆಗೆ ಮುಂದುವರೆಯಲಿದೆ. ಉತ್ತರ ಧ್ರುವದ ಚಳಿಗಾಲದ ಅವಧಿಯವರೆಗೆ ಸೋಂಕು ಏರಿಕೆ ಕಾಣಬಹುದು ಎಂದರು.

ಗ್ರೀಕ್‌ನಲ್ಲಿ ಲಸಿಕೆಗೆ ಮನವಿ:ಗ್ರೀಕ್​ನಲ್ಲಿ ಕೋವಿಡ್​ ಮತ್ತು ಇನ್ಫುಯೆಂಜಾ ಸೋಂಕಿನ ಹೆಚ್ಚಳ ಕಂಡು ಬಂದಿದ್ದು, ಲಸಿಕೆ ಪಡೆಯುವಂತೆ ಸರ್ಕಾರ ಜನರಿಗೆ ಮನವಿ ಮಾಡಿದೆ. ಇತ್ತೀಚಿಗೆ ಸಾವನ್ನಪ್ಪಿದ ಸೋಂಕಿತರು ಯಾವುದೇ ರೀತಿಯ ಲಸಿಕೆ ಪಡೆದಿಲ್ಲ ಎಂಬುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಜನರು ಲಸಿಕೆ ಪಡೆಯಲು ಮುಂದಾಗಬೇಕು ಎಂದು ಆರೋಗ್ಯ ಸಚಿವ ಅಡೋನಿಸ್ ಜಾರ್ಜಿಯಾಡಿಸ್ ಅಥೆನ್ಸ್​​ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಗ್ರೀಕ್​ ದೇಶದಲ್ಲಿ ಸೆಪ್ಟೆಂಬರ್​ನಿಂದ ದಾಖಲಾದ 1,028 ಕೋವಿಡ್​ ಸಂಬಂಧಿತ ಸಾವಿನ ಪ್ರಕರಣದಲ್ಲಿ ಇಬ್ಬರು ಮಾತ್ರ ಲಸಿಕೆ ಪಡೆದಿದ್ದರು. ಉಳಿದ ಶೇ.90ರಷ್ಟು ಮಂದಿ ಲಸಿಕೆ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಜನರು ಸುರಕ್ಷತೆಗೆ ಮುಂದಾಗಬೇಕಿದೆ. ತಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್​ ಧರಿಸಬೇಕಿದೆ. ಆಸ್ಪತ್ರೆಗಳಲ್ಲಿ ಮಾಸ್ಕ್​ಧಾರಣೆ ಕಡ್ಡಾಯ ಎಂದು ಹೇಳಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಜೆಎನ್​.1 ರೂಪಾಂತರಿಯು ಗಂಭೀರ ವಿಕಸನದ​ ವೈರಸ್​ ಎಂದ ತಜ್ಞರು

ABOUT THE AUTHOR

...view details