ಕರ್ನಾಟಕ

karnataka

ETV Bharat / sukhibhava

ಸಾಮಾಜಿಕ ಮಾಧ್ಯಮದಿಂದ ದೂರವಿದ್ದಷ್ಟೂ ಮಾನಸಿಕ ಆರೋಗ್ಯ ಸುಧಾರಣೆ: ಸಂಶೋಧನಾ ವರದಿ - ಮಾನಸಿಕ ಯೋಗಕ್ಷೇಮ

ಸಾಮಾಜಿಕ ಮಾಧ್ಯಮ ಬಳಕೆಯನ್ನು ಕಡಿಮೆ ಮಾಡಿದರೆ ಮಾನಸಿಕ ಆರೋಗ್ಯ ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

30 mins less social media use daily can make you happier, productive at work
30 mins less social media use daily can make you happier, productive at work

By ETV Bharat Karnataka Team

Published : Dec 17, 2023, 3:51 PM IST

ಲಂಡನ್: ಸಾಮಾಜಿಕ ಮಾಧ್ಯಮದ ಬಳಕೆಯನ್ನು ದಿನಕ್ಕೆ ಕೇವಲ 30 ನಿಮಿಷ ಕಡಿಮೆ ಮಾಡುವುದರಿಂದ ಮನುಷ್ಯರ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಸಾಮಾಜಿಕ ಮಾಧ್ಯಮದಿಂದ ಒಂದಿಷ್ಟು ಕಾಲ ದೂರವಿದ್ದರೆ ಕೆಲಸದ ಸ್ಥಳದಲ್ಲಿ ಹೆಚ್ಚು ಖುಷಿಯಾಗಿರಬಹುದು ಮತ್ತು ಬದ್ಧತೆ ಸುಧಾರಣೆಯಾಗುತ್ತದೆ ಎಂದು ಅದು ಹೇಳಿದೆ.

ಸಾಮಾಜಿಕ ಮಾಧ್ಯಮಗಳು ಅನೇಕ ಜನರ ಜೀವನದ ಅವಿಭಾಜ್ಯ ಅಂಗವಾಗಿವೆ ಎಂಬುದು ನಿಜವಾದರೂ ಇವು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಮತ್ತು ಬಳಕೆದಾರರು ಆನ್‌ಲೈನ್‌ನಲ್ಲಿ ಇಲ್ಲದಿದ್ದಾಗ ತಮ್ಮ ನೆಟ್‌ವರ್ಕ್‌ನಲ್ಲಿ ನಡೆಯುತ್ತಿರುವ ಪ್ರಮುಖ ಸಂಗತಿಗಳು ತಮಗೆ ತಿಳಿಯುತ್ತಿಲ್ಲವೇನೋ ಎಂಬ ಭಯವನ್ನುಂಟು ಮಾಡುತ್ತವೆ. ಈ ವಿದ್ಯಮಾನವನ್ನು ಎಫ್ಒಎಂಒ (ಮಿಸ್ಸಿಂಗ್ ಔಟ್ ಭಯ) ಎಂದು ಕರೆಯಲಾಗುತ್ತದೆ.

"ಜನರು ತಮ್ಮ ದೈನಂದಿನ ಕೆಲಸದ ಜೀವನದಲ್ಲಿ ಕಾಣಲಾಗದ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸಿಕೊಳ್ಳಲು ಸಾಮಾಜಿಕ ನೆಟ್​ವರ್ಕ್​ಗಳನ್ನು ಬಳಸುತ್ತಾರೆ ಎಂದು ಅನಿಸುತ್ತದೆ. ವಿಶೇಷವಾಗಿ ಜನ ಅತಿಯಾದ ಕೆಲಸದ ಒತ್ತಡದಿಂದ ಬಳಲಿದಾಗ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಾರೆ" ಎಂದು ಜರ್ಮನಿಯ ರುಹ್ರ್ ವಿಶ್ವವಿದ್ಯಾಲಯದ ಮಾನಸಿಕ ಆರೋಗ್ಯ ಸಂಶೋಧನೆ ಮತ್ತು ಚಿಕಿತ್ಸಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಜೂಲಿಯಾ ಬ್ರೈಲೋವ್ಸ್ಕಾಯಾ ವಿವರಿಸುತ್ತಾರೆ.

ಇದಲ್ಲದೆ, ಲಿಂಕ್ಡ್ಇನ್​ನಂಥ ಕೆಲ ಪ್ಲಾಟ್​ಫಾರ್ಮ್​ಗಳು ನಿಮ್ಮ ಪ್ರಸ್ತುತ ನೌಕರಿಯ ಬಗ್ಗೆ ನೀವು ಅತೃಪ್ತಿ ಹೊಂದಿದ್ದರೆ ಹೊಸ ಉದ್ಯೋಗಗಳನ್ನು ಹುಡುಕುವ ಅವಕಾಶವನ್ನು ಸಹ ನೀಡುತ್ತವೆ ಎಂದು ಅವರು ಹೇಳಿದರು. ಅಲ್ಪಾವಧಿಯಲ್ಲಿ ವಾಸ್ತವದಿಂದ ತಪ್ಪಿಸಿಕೊಂಡು ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣು ಹಾಯಿಸುವುದು ನಿಜವಾಗಿಯೂ ನಿಮ್ಮ ಮನಸ್ಥಿತಿಯನ್ನು ಸುಧಾರಿಸಬಹುದು; ಆದರೆ ದೀರ್ಘಾವಧಿಯಲ್ಲಿ, ಇದು ವಿರುದ್ಧ ಪರಿಣಾಮ ಬೀರುವ ವ್ಯಸನಕಾರಿ ನಡವಳಿಕೆಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಬಳಕೆಯ ಪರಿಣಾಮಗಳ ಬಗ್ಗೆ ತಜ್ಞರ ತಂಡವು ನಡೆಸಿದ ಸಂಶೋಧನಾ ವರದಿಯು ಬಿಹೇವಿಯರ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ ಜರ್ನಲ್​ನಲ್ಲಿ ಪ್ರಕಟವಾಗಿದೆ.

ಸಂಶೋಧನಾ ಅಧ್ಯಯನದಲ್ಲಿ ಒಟ್ಟು 166 ಜನ ಭಾಗವಹಿಸಿದ್ದರು. ಇವರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಅರೆಕಾಲಿಕ ಅಥವಾ ಪೂರ್ಣ ಸಮಯ ಕೆಲಸ ಮಾಡುವವರಾಗಿದ್ದು, ತಮ್ಮ ನೌಕರಿಗೆ ಸಂಬಂಧಿಸದ ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ದಿನಕ್ಕೆ ಕನಿಷ್ಠ 35 ನಿಮಿಷಗಳನ್ನು ಕಳೆದರು. ಸ್ಪರ್ಧಿಗಳನ್ನು ಎರಡು ಗುಂಪುಗಳ ಮಧ್ಯೆ ಬದಲಾಯಿಸಲಾಯಿತು. ಇದರಲ್ಲಿ ಒಂದು ಗುಂಪಿನವರು ತಮ್ಮ ಸಾಮಾಜಿಕ ಮಾಧ್ಯಮ ಬಳಸುವ ಸಹಜ ಅಭ್ಯಾಸವನ್ನು ಬದಲಾಯಿಸಲಿಲ್ಲ. ಆದರೆ ಇನ್ನೊಂದು ಗುಂಪಿನಲ್ಲಿದ್ದವರು ಏಳು ದಿನಗಳವರೆಗೆ ತಾವು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವ ಸಮಯವನ್ನು ದಿನಕ್ಕೆ 30 ನಿಮಿಷಗಳಷ್ಟು ಕಡಿಮೆ ಮಾಡಿದರು.

ಪ್ರಯೋಗ ಪ್ರಾರಂಭವಾಗುವ ಮೊದಲು, ಪ್ರಯೋಗ ಪ್ರಾರಂಭವಾದ ಮರುದಿನ ಮತ್ತು ಒಂದು ವಾರದ ನಂತರ ಪ್ರಯೋಗದಲ್ಲಿ ಭಾಗವಹಿಸಿದ್ದವರು ತಮ್ಮ ಕೆಲಸದ ಹೊರೆ, ಕೆಲಸದ ತೃಪ್ತಿ, ಬದ್ಧತೆ, ಮಾನಸಿಕ ಆರೋಗ್ಯ, ಒತ್ತಡದ ಮಟ್ಟಗಳು, ಎಫ್ಒಎಂಒ ಮತ್ತು ವ್ಯಸನಕಾರಿ ಸಾಮಾಜಿಕ ಮಾಧ್ಯಮ ಬಳಕೆಯನ್ನು ಸೂಚಿಸುವ ನಡವಳಿಕೆಗಳ ಬಗ್ಗೆ ಮಾಹಿತಿ ಒದಗಿಸುವ ವಿವಿಧ ಪ್ರಶ್ನಾವಳಿಗಳ ಬಗ್ಗೆ ಆನ್​ಲೈನ್​ ಮೂಲಕ ಉತ್ತರಿಸಿದ್ದರು.

"ಈ ಅಲ್ಪಾವಧಿಯ ಪ್ರಯೋಗದ ನಂತರ ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ 30 ನಿಮಿಷಗಳಷ್ಟು ಕಡಿಮೆ ಕಳೆಯುವ ಗುಂಪಿನ ಉದ್ಯೋಗ ತೃಪ್ತಿ ಮತ್ತು ಮಾನಸಿಕ ಆರೋಗ್ಯ ಗಮನಾರ್ಹವಾಗಿ ಸುಧಾರಿಸಿರುವುದನ್ನು ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಬ್ರೈಲೋವ್ಸ್ಕಾಯಾ ಹೇಳಿದರು. "ಈ ಗುಂಪಿನಲ್ಲಿದ್ದವರು ಕೆಲಸದ ಹೊರೆಯನ್ನು ಕಡಿಮೆ ಅನುಭವಿಸಿದರು ಮತ್ತು ಕೆಲಸದಲ್ಲಿ ಹೆಚ್ಚು ಬದ್ಧರಾಗಿದ್ದರು." ಎಂದು ಅವರು ತಿಳಿಸಿದರು.

ಸಂಶೋಧನೆಯಲ್ಲಿ ಪಾಲ್ಗೊಂಡು ಸಾಮಾಜಿಕ ಮಾಧ್ಯಮದ ಬಳಕೆ ಮಾಡಿದ್ದವರ ಎಫ್ಒಎಂಒ ಪ್ರಜ್ಞೆಯೂ ಕಡಿಮೆಯಾಗಿತ್ತು. ಪ್ರಯೋಗದ ಅಂತ್ಯದ ನಂತರ ಪರಿಣಾಮಗಳು ಕನಿಷ್ಠ ಒಂದು ವಾರದವರೆಗೆ ಇದ್ದವು ಮತ್ತು ಈ ಸಮಯದಲ್ಲಿ ಕೆಲ ಸಂದರ್ಭಗಳಲ್ಲಿ ಹೆಚ್ಚಾಯಿತು. ತಮ್ಮ ದೈನಂದಿನ ಸಾಮಾಜಿಕ ಮಾಧ್ಯಮ ಬಳಕೆಯನ್ನು ಸ್ವಯಂಪ್ರೇರಣೆಯಿಂದ ಕಡಿಮೆ ಮಾಡಿದವರು ಒಂದು ವಾರದ ನಂತರವೂ ಸ್ವಯಂ ಪ್ರೇರಿತರಾಗಿ ಅದನ್ನು ಮುಂದುವರಿಸಿದರು.

ತಮ್ಮ ಸಾಮಾಜಿಕ ಮಾಧ್ಯಮ ಬಳಕೆಯನ್ನು ಕಡಿಮೆ ಮಾಡುವ ಮೂಲಕ, ಅವರು ತಮ್ಮ ಕೆಲಸವನ್ನು ಮುಗಿಸಲು ಹೆಚ್ಚಿನ ಸಮಯ ಹೊಂದಿದ್ದರು ಎಂದು ಸಂಶೋಧಕರು ಊಹಿಸಿದ್ದಾರೆ. ಇದರರ್ಥ ಅವರು ಕಡಿಮೆ ಕೆಲಸದ ಒತ್ತಡ ಅನುಭವಿಸಿದ್ದರು. ಒಟ್ಟಾರೆಯಾಗಿ ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡುವ ಮೂಲಕ ವ್ಯಕ್ತಿಯೊಬ್ಬನ ಮಾನಸಿಕ ಯೋಗಕ್ಷೇಮ ಸುಧಾರಿಸಲು ಸಾಧ್ಯ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: ಕಂಪ್ಯೂಟರ್ ಚಿಪ್​ಗಳಿಗಿಂತ ಪ್ರತಿಭೆಯೇ ಭಾರತದ ಎಐ ತಂತ್ರಜ್ಞಾನ ಪ್ರಗತಿಗೆ ಕಾರಣ; ಸಚಿವ ರಾಜೀವ್ ಚಂದ್ರಶೇಖರ್

ABOUT THE AUTHOR

...view details