ಬ್ರಿಟಿಷ್ ಕೊಲಂಬಿಯಾ (ಕೆನಡಾ):ದೈಹಿಕ ಚಟುವಟಿಕೆ ನಿಷ್ಕ್ರಿಯತೆಯಿಂದ ಪ್ರಪಂಚದಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಿವೆ. ಈ ರೀತಿಯ ಸಾವಿನ ಪ್ರಕರಣಗಳು ನಾಲ್ಕನೇ ಪ್ರಮುಖ ಕಾರಣವಾಗಿರುವುದು ದುರಂತ. ದೀರ್ಘಕಾಲದ ಅನಾರೋಗ್ಯ ಹಾಗೂ ಅಂಗವೈಕಲ್ಯವೂ ಕೂಡ ಇದೇ ಸಾಲಿನಲ್ಲಿ ಬರುತ್ತದೆ ಎಂಬುದು ಅಧ್ಯಯನ ವರದಿಯಿಂದ ತಿಳಿದುಬಂದಿದೆ. ಜನರು ದೈಹಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರದಿದ್ದರೆ, 2030ರ ವೇಳೆಗೆ ಪ್ರಪಂಚದ ಅರ್ಧ ಶತಕೋಟಿ ಹೊಸ ಪ್ರಮುಖ ದೀರ್ಘಕಾಲದ ಕಾಯಿಲೆಗಳು ಬರಲಿವೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ನಿಯಮಿತ ದೈಹಿಕ ಚಟುವಟಿಕೆಯು ಅನೇಕ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ದೈಹಿಕವಾಗಿ ಸಕ್ರಿಯವಾಗಿರಬೇಕಾದರೆ, ವಾಕಿಂಗ್, ಸೈಕ್ಲಿಂಗ್ ಮತ್ತು ವಿವಿಧ ಕ್ರೀಡೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ.
ವಿಶ್ವ ಆರೋಗ್ಯ ಸಂಸ್ಥೆ:ಮಕ್ಕಳು ಮತ್ತು ಹದಿಹರೆಯದವರು (5ರಿಂದ 17ವರ್ಷದೊಳಗಿನವರು) ದಿನಕ್ಕೆ ಸರಾಸರಿ 60 ನಿಮಿಷಗಳವರೆಗೆ ದೈಹಿಕ ಚಟುವಟಿಕೆಯಲ್ಲಿ(ವ್ಯಾಯಾಮ) ತೊಡಗಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಓ) ಶಿಫಾರಸು ಮಾಡುತ್ತದೆ. ಏರೋಬಿಕ್ ಚಟುವಟಿಕೆಗಳನ್ನು ಮಾಡಿದ್ರೆ ಇನ್ನೂ ಒಳ್ಳೆಯದು. ಜೊತೆಗೆ ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಸ್ನಾಯು ಮತ್ತು ಮೂಳೆಗಳನ್ನು ಬಲಪಡಿಸಲು ಪೂರಕವಾದ ವ್ಯಾಯಾಮಗಳನ್ನು ಮಾಡಬೇಕು. ಮಕ್ಕಳು ಮನರಂಜನೆ ಕಾರ್ಯಕ್ರಮ ವೀಕ್ಷಿಸಲು ಎರಡು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಮೀಸಲಿಡಬಾರದು ಎಂದು ಡಬ್ಲ್ಯೂಹೆಚ್ಓ ಹೇಳಿದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಈ ಶಿಫಾರಸುಗಳ ಮುಖ್ಯ ಗುರಿಯಾಗಿದೆ.
ಜಾಗತಿಕ ಕ್ರಿಯಾ ಯೋಜನೆ:ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಬರುವುದಕ್ಕೂ ಮುನ್ನ, ಮಕ್ಕಳು ಮತ್ತು ಹದಿಹರೆಯದವರಲ್ಲಿ ದೈಹಿಕ ಚಟುವಟಿಕೆ ಕ್ರಿಯಾಶೀಲತೆ ತುಂಬಾ ಕುಸಿದಿತ್ತು. 2016ರಲ್ಲಿ ಪ್ರಪಂಚದಾದ್ಯಂತ 11ರಿಂದ 17ವರ್ಷದ ಹದಿಹರೆಯದವರಲ್ಲಿ ಶೇಕಡಾ 81ರಷ್ಟು ಜನರು ದೈಹಿಕವಾಗಿ ನಿಷ್ಕ್ರಿಯರಾಗಿದ್ದಾರೆ ಎಂದು ಪರಿಗಣಿಸಲ್ಪಟ್ಟಿದೆ. ಹುಡುಗರಿಗಿಂತ ಹುಡುಗಿಯರು ಕಡಿಮೆ ಕ್ರಿಯಾಶೀಲರಾಗಿದ್ದರು. ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಂತೂ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ದೈಹಿಕ ನಿಷ್ಕ್ರಿಯತೆಯು ಜಾಗತಿಕ ಸಾರ್ವಜನಿಕ ಆರೋಗ್ಯದ ಆದ್ಯತೆಯಾಗಿದೆ. ಇದನ್ನು ಈಗ ಜಾಗತಿಕ ಕ್ರಿಯಾ ಯೋಜನೆಗಳ ಅಡಿಯಲ್ಲಿ ಸೇರಿಸಲಾಗಿದೆ.
ದೈಹಿಕ ನಿಷ್ಕ್ರಿಯತೆ ಪ್ರಮಾಣ:2016 ವರ್ಷವನ್ನು ಆಧಾರವಾಗಿಟ್ಟುಕೊಂಡರೆ, ಡಬ್ಲೂಹೆಚ್ಓ ದೈಹಿಕ ಚಟುವಟಿಕೆಯ ಮೇಲಿನ ಜಾಗತಿಕ ಕ್ರಿಯಾ ಯೋಜನೆಯನ್ನು ಹಾಕಿಕೊಂಡಿದೆ. 2030ರ ವೇಳೆಗೆ ಹದಿಹರೆಯದವರಲ್ಲಿ ದೈಹಿಕ ನಿಷ್ಕ್ರಿಯತೆಯ ಪ್ರಮಾಣವನ್ನು ಶೇಕಡಾ 15ರಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಗುರಿಯನ್ನು ಇಟ್ಟುಕೊಂಡಿದೆ. ಈ ಕಾರ್ಯಕ್ಕೆ ಕರೆಕೊಟ್ಟಿರುವುದು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಹಾಗೂ ಸರ್ಕಾರಗಳಿಗೆ ಪ್ರಗತಿ ಸಾಧಿಸಲು ಸಹಕಾರಿಯಾಗಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಪ್ರಮುಖ ಉದ್ದೇಶವಾಗಿದೆ.