ಸುರಪುರ:ಕೊರೊನಾ ಲಾಕ್ಡೌನ್ನಿಂದ ನಗರದಲ್ಲಿ ಹೈದರಾಬಾದ್ ಮೂಲದ ಬಡ ಕುಟುಂಬವೊಂದು ಹತ್ತು ದಿನದ ಎಳೆ ಕಂದಮ್ಮನ ಜೊತೆ ಬೀದಿಯಲ್ಲೇ ಜೀವನ ಸಾಗಿಸುತ್ತಾ ಹೈರಾಣಾಗಿದೆ.
ಹೈದರಾಬಾದ್ ನಗರದ ಲಂಗಾರ್ ಹೌಸ್ ಪ್ರದೇಶದ ಶಂಕರ್ ಎಂಬ ವ್ಯಕ್ತಿ ತನ್ನ ಪತ್ನಿ ಸಮೇತ ಮಾವನ ಮನೆ ಇರುವ ಕುಂಬಾರಪೇಟಕ್ಕೆ ಬಂದಿದ್ದರು. ಪತ್ನಿಗೆ ಹೆರಿಗೆ ಸಮಯವಾಗಿದ್ದರಿಂದ ಹೈದರಾಬಾದ್‌ಗೆ ಕರೆದುಕೊಂಡು ಹೋಗುವ ತಯಾರಿಯಲ್ಲಿರುವಾಗ ಕೊರೊನಾ ವೈರಸ್ ದೇಶದಲ್ಲಿ ವ್ಯಾಪಿಸುತ್ತಿರುವುದನ್ನು ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಇದರಿಂದ ಶಂಕರ್ ಕುಟುಂಬ ಮಾವನ ಮನೆಯಲ್ಲೇ ಉಳಿದುಕೊಳ್ಳಬೇಕಾಯಿತು.
ನಂತರ ಮಾವನೇ ಇವರ ಜೊತೆ ಜಗಳವಾಡಿ ಶಂಕರ್ ಹಾಗೂ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಅತ್ತ ಊರಿಗೆ ಹೋಗಲಾಗದೆ, ಇತ್ತ ಮಾವನ ಮನೆಯಲ್ಲೂ ಜಾಗವಿಲ್ಲದೆ, ಮಾಡಲು ಕೆಲಸವಿಲ್ಲದೆ ತೊಂದರೆಗೆ ಸಿಲುಕಿದೆ ಈ ಕುಟುಂಬ.
ಈ ನಡುವೆ ಶಂಕರ್ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಎರಡು ದಿನ ಆಸ್ಪತ್ರೆಯಲ್ಲಿದ್ಧು, ಅಲ್ಲಿಂದ ಹೊರ ಬಂದು ಮೊದಲು ಎರಡು ದಿನ ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ಮುಖ್ಯ ಹೆದ್ದಾರಿ ಪಕ್ಕದಲ್ಲಿ ದಿನ ಕಳೆದಿದ್ದಾರೆ. ನಂತರ ಸಾರ್ವಜನಿಕರು ಇವರ ಬಳಿ ಬಂದಿದ್ದಾರೆ. ಬಾಣಂತಿ ಇರುವುದರಿಂದ ರಸ್ತೆಯ ಮೇಲೆ ಇರುವುದು ಬೇಡವೆಂದು ಕುಂಬಾರಪೇಟೆಯ ನೀರು ಸರಬರಾಜಿನ ಟ್ಯಾಂಕ್ ಬಳಿಗೆ ಕಳುಹಿಸಿದ್ದಾರೆ. ಈಗ ಕಳೆದ ಎಂಟು ದಿನಗಳಿಂದ ವಾಟರ್ ಫೀಲ್ಟರ್ ತೊಟ್ಟಿಯ ಕೆಳಗೆ ಹತ್ತು ದಿನದ ಹಸುಗೂಸಿನೊಂದಿಗೆ ಕಾಲ ಕಳೆದಿದೆ ಈ ಕುಟುಂಬ.
ಇವರು ವಾಸವಾಗಿರುವ ಅನತಿ ದೂರದಲ್ಲಿಯೇ ಮಾವನ ಮನೆ ಇದ್ದರೂ ಮಾವ ಮಾತ್ರ ಮಗಳು ಹೆರಿಗೆಯಾಗಿ ಹಾದಿಯಲ್ಲಿದ್ದರೂ ಬಂದು ನೋಡಿಲ್ಲವಂತೆ. ಅಲ್ಲಿಯ ಪಕ್ಕದ ಮನೆಯವರು ಶಂಕರ್‌ಗೆ ಒಂದೆರಡು ಪಾತ್ರೆಗಳನ್ನು ಕೊಟ್ಟು ಬಾಣಂತಿಗೆ ಮತ್ತು ಮಗುವಿಗೆ ಬಿಸಿ ನೀರು ಕಾಯಿಸಿಕೊಳ್ಳಲು ನೆರವಾಗಿದ್ದಾರೆ.
ಇತ್ತ ದಿನದ ಊಟಕ್ಕೂ ಗತಿಯಿಲ್ಲದಂತಾಗಿದ್ದ ಶಂಕರ್ ಕುಟುಂಬದ ಸ್ಥಿತಿ ಕಂಡ ಟೀಂ ರಾಜುಗೌಡ ಸೇವಾ ಸಮಿತಿಯ ಕಾರ್ಯಕರ್ತರು, ಕಳೆದ ಒಂದು ವಾರದಿಂದ ನಿತ್ಯವು ಅನ್ನ, ನೀರು ನೀಡುತ್ತಿದ್ದಾರೆ, ಅಲ್ಲದೆ ಆಹಾರ ಸಾಮಗ್ರಿ ಮತ್ತು ಅಗತ್ಯ ವಸ್ತುಗಳ ಕಿಟ್ ನೀಡಿ ನೆರವಾಗಿದ್ದಾರೆ.