ಯಾದಗಿರಿ: ಶಹಾಪೂರ ತಾಲೂಕಿನ ಗ್ರಾಮಗಳ ರೈತರು ಬೆಳೆದ ಹತ್ತಿಗೆ ಗುಲಾಬಿ ಕಾಯಿಕೊರಕ ಹುಳು ತಗುಲಿದ್ದು, ರೈತರು ಆತಂಕಗೊಂಡಿದ್ದಾರೆ.
ತಾಲೂಕಿನ ಗ್ರಾಮಗಳಾದ ಗುಂಡಳ್ಳಿ, ವಿಭೂತಿಹಳ್ಳಿ, ಚನ್ನೂರ, ಆಲ್ದಾಳ, ಚಾಮನಾಳ ಹಾಗೂ ಮಲ್ಲಾಬಾದ ಗ್ರಾಮಗಳಿಗೆ ಭೀಮರಾಯನಗುಡಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಜ್ಞಾನಿಗಳ ತಂಡ ಭೇಟಿ ನೀಡಿ, ಸಮೀಕ್ಷೆ ನಡೆಸಿದಾಗ ಬೆಳಕಿಗೆ ಬಂದಿದೆ.
ಪ್ರಾರಂಭ ಹಂತದಲ್ಲಿ ರೈತರು ಇದರ ಬಗ್ಗೆ ಜಾಗೃತಿವಹಿಸಬೇಕು. ಇಲ್ಲವಾದರೇ ನಷ್ಟ ಅನುಭವಿಸಬೇಕಾಗುತ್ತದೆ. ಪ್ರಮುಖವಾಗಿ ಹತ್ತಿಯ ಕೆಳ ಭಾಗದ ಕಾಯಿಗಳನ್ನು ಪರಿಶೀಲಿಸಬೇಕು. ಹುಳದ ಭಾದೆ ಕಂಡು ಬಂದರೇ ಸಮಗ್ರ ಕೀಟ ನಿರ್ವಹಣೆ ಪದ್ಧತಿ ಅಳವಡಿಸಬೇಕು ಎಂದು ಕೃಷಿ ವಿಸ್ತರಣಾ ಡಾ. ಬಿ.ಎಸ್.ರಡ್ಡಿ ಅವರು ಮನವಿ ಮಾಡಿದರು.
ಹತ್ತಿಗೆ ಕಾಡುತ್ತಿದೆ ಕಾಯಿಕೊರಕ ಹುಳು ಭಾದೆ ಸುಮಾರು 12-15 ಮೊಹಕ ಬಲೆಗಳನ್ನು ಪ್ರತಿ ಎಕರೆಗೆ ಅಳವಡಿಸಬೇಕು. ನಂತರ, ಭಾದೆಯಾದ ಹೂವು, ಕಾಂಡ ಮತ್ತು ಕಾಯಿಗಳನ್ನು ಗಿಡದಿಂದ ತೆಗೆದು ಹಾಕಬೇಕು. ಇದಾದ ನಂತರ 1 ಮಿ.ಲೀ. ಸೈಫರ್‍ಮೈಥ್ರಿನ್, 10 ಇ.ಸಿ ಅಥವಾ 2 ಮಿ.ಲೀ. ಪ್ರೊಫೆನೋಫಾಸ್, 50 ಇ. ಸಿ. ಅಥವಾ 1 ಮಿ. ಲೀ. ಲ್ಯಾಮ್ಡಾಸೈಲೋಥ್ರಿನ್(ಕರಾಟೆ), 10 ಇ. ಸಿ. ಅಥವಾ ಅಸಿಫೇಟ 1 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು ಎಂದು ತಿಳಿಸಿದರು.
ವಿಜ್ಞಾನಿಗಳಾದ ಡಾ.ಶಿವಾನಂದ ಹೊನ್ನಾಳಿ, ಡಾ.ಬಸವರಾಜ ಕಲ್ಮಠ ಡಾ.ರವಿ ಪೂಜಾರಿ, ಸಂತೋಷ, ಶಿವರಾಜು ಸೇರಿದಂತೆ ರೈತರಾದ ಅನಿಲ ರಾಠೋಡ, ಅಮಿರಲಿ, ಗುರುನಾಥರೆಡ್ಡಿ ಚನ್ನೂರ, ರುದ್ರುಗೌಡ ಪಾಟೀಲ್ ಮಲ್ಲಾಬಾದ, ಚನ್ನಾರೆಡ್ಡಿ, ಹಣಮಂತ್ರಾಯ ಆಲ್ದಾಳರವರ ಕ್ಷೇತ್ರಗಳಿಗೆ ಭೇಟಿ ನೀಡಲಾಯಿತು.