ಸುರಪುರ:ಕೊರೊನಾ ವೈರಸ್ ಹಾವಳಿಗೆ ಜಗತ್ತೇ ನಡುಗಿದ್ದು, ಅದರ ಪರಿಣಾಮ ದೇಶದ ಎಲ್ಲಾ ರಂಗಗಳ ಮೇಲೆ ಬೀರಿದೆ. ವೈರಸ್ ನೀಡಿದ ಹೊಡೆತಕ್ಕೆ ತಾಲೂಕಿನ ಕೆಂಭಾವಿ ಪಟ್ಟಣದ ಪ್ರತಾಪ ಗಿರಿ ವೆಂಕಟಸುಬ್ಬಯ್ಯ ಶಾಸ್ತ್ರಿ (ಪಿವಿಎಸ್) ಖಾಸಗಿ ಶಾಲೆಯ ಮುಖ್ಯಸ್ಥ ಹಾಗೂ ಶಿಕ್ಷಕರೊಬ್ಬರು ಬೀದಿಬದಿ ವ್ಯಾಪಾರದಲ್ಲಿ ತೊಡಗಿದ್ದಾರೆ.
ಒಬ್ಬ ಶಿಕ್ಷಕ ಮಕ್ಕಳಿಗೆ ಆದರ್ಶ ಹಾಗೂ ಸಮಾಜಕ್ಕೆ ಹೇಗೆ ಮಾದರಿಯಾಗಬಲ್ಲ ಎಂಬುದಕ್ಕೆ ಶಿಕ್ಷಕ ಸಂತೋಷ್ ಅವರೇ ಸಾಕ್ಷಿಯಾಗುತ್ತಾರೆ. ಸುಮಾರು 15 ವರ್ಷಗಳಿಂದ ಖಾಸಗಿ ಶಾಲೆಯೊಂದನ್ನು ನಡೆಸಿಕೊಂಡು ಬರುತ್ತಿರುವ ಅವರು, ಹಣ ಗಳಿಕೆಗೆ ಆಸೆಪಡದೆ ಅತಿ ಕಡಿಮೆ ಶುಲ್ಕದಲ್ಲೇ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಿ ಸಾರ್ಥಕತೆ ಮೆರೆದವರು.
ಪಿವಿಎಸ್ ಶಾಲೆ ಕೆಂಭಾವಿ ಪಟ್ಟಣದ ಎಲ್ಲರಿಗೂ ಚಿರಪರಿಚಿತ. ಆದರೆ, ಕಳೆದ 5 ತಿಂಗಳ ಹಿಂದೆ ರಾಜ್ಯದಲ್ಲಿ ಮಹಾಮಾರಿಯಂತೆ ವಕ್ಕರಿಸಿರುವ ಕೊರೊನಾ ವೈರಸ್ನಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆಯ ಕರಿಛಾಯೆ ಶಿಕ್ಷಣ ಸಂಸ್ಥೆಯ ಮೇಲೆ ಬೀರಿತು. ಇದರಿಂದಾಗಿ ಶಾಲೆ ನಡೆಯದ ಕಾರಣ ಜೀವನ ನಡೆಸುವುದು ಕಷ್ಟವಾಯಿತು.