ವಿಜಯಪುರ: ಕಾಲೇಜಿಗೆ ಹೋದ ಅಪ್ರಾಪ್ತೆ ಮರಳಿ ಮನೆಗೆ ಬಾರದ ಹಿನ್ನೆಲೆ ಅಪಹರಣದ ಶಂಕೆ ವ್ಯಕ್ತಪಡಿಸಿರುವ ಪಾಲಕರು ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದ ಶಾಂತಿ ನಗರದ ನಿವಾಸಿಯೊಬ್ಬರ 17 ವರ್ಷದ ಮಗಳು ಕಾಣೆಯಾಗಿದ್ದಾಳೆ. ಕಾಲೇಜಿನ ಬಸ್ ಚಾಲಕನೇ ಈ ಕೃತ್ಯ ಎಸಗಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಿ ಮಗಳನ್ನು ಹುಡುಕಿಕೊಡುವಂತೆ ಪಾಲಕರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ವಿವರ: ನಗರದ ಹೊರವಲಯದ ಇಟ್ಟಂಗಿಹಾಳ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನಿತ್ಯ ಕಾಲೇಜಿಗೆ ಹೋಗಲು ಶಾಲಾ ಬಸ್‌ನಲ್ಲಿ ಸಂಚರಿಸುತ್ತಿದ್ದಳು. ಪ್ರತಿ ದಿನ ಮಧುವನ ಕ್ರಾಸ್ ಹತ್ತಿರ ಬಸ್ ಬರುತ್ತಿದ್ದು, ಅಲ್ಲಿಂದಲೇ ಬಸ್ ಹತ್ತಿ ಕಾಲೇಜಿಗೆ ತೆರಳುವುದು ಮತ್ತು ವಾಪಸ್ ಅದೇ ಸ್ಥಳಕ್ಕೆ ಬಂದಿಳಿಯುತ್ತಿದ್ದಳು.
ಜೂ. 7ರಂದು ಬೆಳಗ್ಗೆ 7.40ರ ಸುಮಾರಿಗೆ ಎಂದಿನಂತೆ ಅಪ್ರಾಪ್ತೆ ತನ್ನ ತಂದೆ ಜತೆ ಬಂದು ಕಾಲೇಜ್ ಬಸ್ ಹತ್ತಿದ್ದಳು. ಆದರೆ ಸಂಜೆ 6.10ರ ಸುಮಾರಿಗೆ ಅದೇ ಮಧುವನ ಕ್ರಾಸ್ ಹತ್ತಿರ ಮಗಳ ಬರುವಿಕೆಗಾಗಿ ತಂದೆ ಕಾದು ನಿಂತಿದ್ದಾರೆ. ಆದರೆ, ಮಗಳು ಬಾರದ ಹಿನ್ನೆಲೆ ಮನೆಗೆ ಹೋಗಿ ವಿಚಾರಿಸಿದ್ದಾರೆ. ಬಳಿಕ ಮನೆಗೂ ಬಂದಿಲ್ಲದ ಕಾರಣ ಶಾಲೆಗೆ ತೆರಳಿ ವಿಚಾರಿಸಿದ್ದಾರೆ. ಆದರೆ ಕಾಲೇಜು ಸಿಬ್ಬಂದಿ ಆಕೆ ತರಗತಿಗೆ ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ.
ಅದೇ ಚಿಂತೆಯಲ್ಲಿರುವಾಗ ಪರಿಚಯಸ್ಥರು ಕಾಲೇಜು ಬಸ್ ಚಾಲಕನೊಬ್ಬನ ಬೈಕ್ ಮೇಲೆ ನಿಮ್ಮ ಪುತ್ರಿ ಹೋಗುತ್ತಿರುವುದನ್ನು ತಾವು ಗಮನಿಸಿದ್ದಾಗಿ ತಿಳಿಸಿದ್ದಾರೆ. ಆತನ ಭೇಟಿಗೆ ಕಾಲೇಜಿಗೆ ತೆರಳಿ ವಿಚಾರಿಸಿದರೆ ಅಲ್ಲೂ ಆತ ಬಂದಿರಲಿಲ್ಲ. ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಅವರ ತಂದೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.