ವಿಜಯಪುರ:ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೇ, ತಲಾ ಒಂದು ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಪಡೆದುಕೊಂಡಿವೆ. ಕಳೆದ ಚುನಾವಣೆಯಲ್ಲಿ 3 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಎರಡು ಕ್ಷೇತ್ರ ಕಳೆದುಕೊಂಡಿವೆ. ಜೆಡಿಎಸ್ 2 ಕ್ಷೇತ್ರದಲ್ಲಿ ಒಂದು ಕ್ಷೇತ್ರ ಕಳೆದುಕೊಂಡರೇ, ಕಾಂಗ್ರೆಸ್ 3 ರಿಂದ 6 ಸ್ಥಾನಕ್ಕೆ ಹೆಚ್ಚಿಸಿಕೊಂಡಿದೆ. ಬಹು ಚರ್ಚಿತ ಕ್ಷೇತ್ರವಾಗಿದ್ದ ವಿಜಯಪುರ ನಗರಕ್ಕೆ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಬಲೇಶ್ವರಕ್ಕೆ ಎಂ.ಬಿ ಪಾಟೀಲ್ ಮರು ಆಯ್ಕೆಯಾಗಿದ್ದಾರೆ.
ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಮರು ಆಯ್ಕೆಯಾಗಿದ್ದಾರೆ. ಮುದ್ದೇಬಿಹಾಳ, ಸಿಂದಗಿ, ದೇವರಹಿಪ್ಪರಗಿಯ ಬಿಜೆಪಿ ಅಭ್ಯರ್ಥಿಗಳು ಸೋತಿದ್ದರೆ, ಇಲ್ಲಿ ಎರಡು ಕ್ಷೇತ್ರ ಕಾಂಗ್ರೆಸ್ ಹಾಗೂ ದೇವರಹಿಪ್ಪರಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಗೆಲುವಿನ ಅಂತರ:ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ 94,201 ಮತಗಳಿಸಿದರೆ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹಮೀದ್ ಮುಷರೀಫ್ 85,978 ಮತಗಳಿಸಿ 8,223 ಮತಗಳ ಅಂತರದಿಂದ ಯತ್ನಾಳ್ ಗೆದ್ದಿದ್ದಾರೆ. ಬಸವನಬಾಗೇವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ 68,126 ಮತ ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಕೆ. ಬೆಳ್ಳುಬ್ಬಿ 43,262 ಮತಗಳಿಸಿದ್ದಾರೆ. 24,864 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ದೇವರಹಿಪ್ಪರಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ 65,952 ಮತ ಹಾಗೂ ಬಿಜೆಪಿಯ ಸೋಮನಗೌಡ ಪಾಟೀಲ ಸಾಸನೂರ 45,777 ಮತ ಗಳಿಸಿದರೆ 20,175 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದರು. ನಾಗಠಾಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ 78,990 ಮತ ಪಡೆದರೆ ಬಿಜೆಪಿಯ ಸಂಜು ಐಹೊಳ್ಳಿ 48,175 ಮತಗಳಿಸಿದರು. 30815 ಮತಗಳ ಅಂತರದಿಂದ ಕಾಂಗ್ರೆಸ್ ಜಯ ಸಾಧಿಸಿದೆ.