ವಿಜಯಪುರ : ಕೆಎಸ್ಆರ್ಟಿಸಿ ಬಸ್, ಲಾರಿ ಹಾಗೂ ಆಟೋ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಐವರು ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ ತಾಲೂಕಿನ ಹಡಗಲಿ-ಕಗ್ಗೋಡ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಜಾಲವಾದಿ ಗ್ರಾಮದ ಬಾಬುಸಾಹೇಬ ಮಕಾನದಾರ (50) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಅಥಣಿಯಿಂದ ಗಾಣಗಾಪುರಕ್ಕೆ ತೆರಳುತ್ತಿದ್ದ ಬಸ್ಗೆ ಕಲಬುರಗಿಯಿಂದ ವಿಜಯಪುರ ಕಡೆಗೆ ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಇದೇ ವೇಳೆ ಬಸ್ನ ಹಿಂದೆ ಬರುತ್ತಿದ್ದ ಆಟೋಗೂ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ರಸ್ತೆ ಬದಿಯ ಹೊಲಕ್ಕೆ ನುಗ್ಗಿದೆ.
ಮೃತ ಬಾಬುಸಾಹೇಬ ಮಕಾನದಾರ ತಾಯಿಗೆ ಬಿಪಿ ಔಷಧಿ ತರಲು ವಿಜಯಪುರಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.
ಚಿಕ್ಕಮಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ:ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಟ್ಟೆಹೊಳೆ ಗೇಟ್ ಬಳಿ ಮಂಗಳವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕ ಮತ್ತು ಯುವತಿ ಮೃತಪಟ್ಟಿರುವ ಘಟನೆ ನಡೆದಿದೆ. ತನ್ನ ಗೆಳೆಯನಿಗೆ ಪರಿಚಯವಿದ್ದ ಯುವತಿಯನ್ನು ಬೈಕ್ನಲ್ಲಿ ಕರೆತರಲು ಹೋದಾಗ ಯುವಕ ಮತ್ತು ಅವನೊಂದಿಗೆ ಬೈಕ್ನಲ್ಲಿ ಬರುತ್ತಿದ್ದ ಯುವತಿ ಸಹ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆಯಿಂದ ಉಭಯ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರಲ್ಲಿ ಶೋಕ ಮಡುಗಟ್ಟಿದೆ.
ಅಷ್ಟಕ್ಕೂ ಆಗಿದ್ದೇನು..ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾ ಯುವಕ ವಿಶ್ವಾಸ ಮತ್ತು ಯುವತಿ ದೀಪಿಕಾ ಕೊನೆಯುಸಿರೆಳೆದಿದ್ದಾರೆ. ದೀಪಿಕಾ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲದವರಾಗಿದ್ದು, ತರೀಕೆರೆ ತಾಲೂಕಿನ ಬೆಲೇನಹಳ್ಳಿ ನಿವಾಸಿ ಕಾರ್ತಿಕ್ ಎಂಬಾತನ ಸ್ನೇಹಿತೆ. ಸಾವನ್ನಪ್ಪಿದ ವಿಶ್ವಾಸ್ ಕೂಡ ಕಾರ್ತಿಕ್ ಗೆಳೆಯ.
ಕಾರ್ತಿಕ್ನ ಸ್ನೇಹಿತೆಯರಾದ ಯುವತಿಯರು ವಿಶ್ವಾಸ್ಗೆ ಪರಿಚಯಸ್ಥರೇನು ಅಲ್ಲಾ, ಆದ್ರೆ ಸ್ನೇಹಿತ ಹೇಳಿದ್ದಕ್ಕೆ ಆತ ಅವರನ್ನು ಕರೆತರಲು ಅವನೊಂದಿಗೆ ಬೈಕ್ ತೆಗೆದುಕೊಂಡು ಹೋಗಿದ್ದ. ಆದ್ರೆ ವಿಧಿಯಾಟಕ್ಕೆ ವಿಶ್ವಾಸ್ ಮತ್ತು ಆ ಯುವತಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ :ದಾವಣಗೆರೆಯಲ್ಲಿ ಟಿಪ್ಪರ್ ಲಾರಿ ಹರಿದು ಬಾಲಕಿ ಸಾವು: ರಸ್ತೆ ತಡೆ ನಡೆಸಿ ಗ್ರಾಮಸ್ಥರ ಪ್ರತಿಭಟನೆ