ಮುದ್ದೇಬಿಹಾಳ :ಮುಂಬೈನ ನೌಕಾನೆಲೆಯಲ್ಲಿ ಹೈಜಿನಿಸ್ಟ್ ವಿಭಾಗದ ಸೇಲರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಶುಕ್ರವಾರ ನಿಧನರಾದ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವರಾಜ ಗುರು ಹೂಗಾರ ಪಾರ್ಥಿವ ಶರೀರ ಇಂದು ಬೆಳಗ್ಗೆ ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಪಾರ್ಥಿವ ಶರೀರವನ್ನು ಹೊತ್ತಿದ್ದ ಆ್ಯಂಬುಲೆನ್ಸ್ ವಾಹನದ ಮೆರವಣಿಗೆಯ ಮೂಲಕ ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನಕ್ಕೆ ತರಲಾಯಿತು. ಈ ವೇಳೆ ತಾಲೂಕಿನ, ಜಿಲ್ಲೆಯ ಗಣ್ಯರು ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಿದ ನಂತರ ಮೃತರ ಸ್ವಗ್ರಾಮ ಕುಂಟೋಜಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು.
ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಅಗಲಿದ ನೇವಿ ನೌಕರನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮೆರವಣಿಗೆ ಮೂಲಕ ಅವರ ತೋಟದಲ್ಲಿ ಹೂಗಾರ ಸಮಾಜದ ವಿಧಿ-ವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.