ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದ ರಸ್ತೆ ಬಳಿ ಗ್ಯಾಂಗ್ರಿನ್ನಿಂದ ನರಳುತ್ತಿದ್ದ ವೃದ್ಧನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದರಿಂದ ಸಾವಾಗಿದೆ ಎಂದು ಸಲಾಂ ಭಾರತ ಟ್ರಸ್ಟ್ ರಾಜ್ಯ ಪ್ರಧಾನ ಕಾರ್ಯದರ್ಶಿಯೋರ್ವರು ಆರೋಪಿಸಿದ್ದಾರೆ.
ಜು.09 ರಂದು ಅಪರಿಚಿತ ವ್ಯಕ್ತಿಯೋರ್ವರು ಅನಾರೋಗ್ಯದಿಂದ ರಸ್ತೆ ಬಳಿ ಬಿದ್ದಿದ್ದಾರೆ ಎಂದು ಸಲಾಂ ಭಾರತ ಟ್ರಸ್ಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಾಜೀದ ಹಡಲಗೇರಿ ಅವರು ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆ ವ್ಯಕ್ತಿ ಮೃತಪಟ್ಟಿದ್ದಾನೆ. ಈತನಿಗೆ 55 ರಿಂದ 60 ವರ್ಷ ವಯಸ್ಸಾಗಿದ್ದು, ಆತನ ಹೆಸರು, ಪರಿಚಯ ವಿಳಾಸ ತಿಳಿದು ಬಂದಿರುವುದಿಲ್ಲ. ಮೃತನ ವಾರಸುದಾರರು ಇದ್ದರೆ ಪೊಲೀಸ್ ಠಾಣೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.