ವಿಜಯಪುರ:ಹಳೆ ಉಮರಾಣಿ ಗ್ರಾಮದಲ್ಲಿ ಸಿಲುಕಿದ್ದ ನೂರಾರು ಜನರನ್ನು ಬೋಟ್ ಕಾರ್ಯಾಚರಣೆ ಮೂಲಕ ಯಶಸ್ವಿಯಾಗಿ ಹೊರ ತಂದು ಹೊಸ ಉಮರಾಣಿ ಗ್ರಾಮದ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು.
ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಗ್ರಾಮಸ್ಥರ ರಕ್ಷಣೆ. ಹಳೆ ಉಮರಾಣಿ ಗ್ರಾಮದಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತವಾಗಿ ಹೊರ ತರಲು ಬೆಳಗ್ಗೆಯಿಂದ ತಾಲೂಕು ಆಡಳಿತ ಕಾರ್ಯಾಚರಣೆ ಆರಂಭಿಸಿತ್ತು. ಇದಕ್ಕಾಗಿ ಕೇವಲ ಒಂದೇ ಬೋಟ್ ವ್ಯವಸ್ಥೆ ಮಾಡಲಾಗಿತ್ತಾದರೂ ಅದರ ಮೂಲಕವೇ ಸುಮಾರು 8-10 ಗ್ರಾಮಸ್ಥರನ್ನು ಹೊರಗೆ ತರಲಾಯಿತು. ನಂತರ ಎನ್ ಡಿಆರ್ ಎಫ್ ಹಾಗೂ ಕಮಾಂಡೋ ತಂಡ ಸ್ಥಳಕ್ಕೆ ಆಗಮಿಸಿ ಉಳಿದ ಜನರನ್ನು ಹರ ಸಾಹಸ ಪಟ್ಟು ರಕ್ಷಿಸಿದರು.
ಹಳೆ ಉಮರಾಣಿ ಗ್ರಾಮದಲ್ಲಿ ಒಟ್ಟು 80ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಜನರು ಕೃಷಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪದೇ ಪದೆ ಭೀಮಾನದಿಗೆ ಹೆಚ್ಚುವರಿ ನೀರು ಬಂದರೆ ಹಳೆ ಉಮರಾಣಿ ಗ್ರಾಮ ಮುಳಗಡೆಯಾಗುತ್ತಲೇ ಇರುತ್ತದೆ. ಈಗ ಹೆಚ್ಚುವರಿ ನೀರು ಮನೆಯೊಳಗೆ ನುಗ್ಗಿದ ಕಾರಣ ಜನ ತೊಂದರೆ ಅನುಭವಿಸಬೇಕಾದ್ದರಿಂದ ತಾಲೂಕು ಆಡಳಿತ ಜನರನ್ನು ಮನವೊಲಿಸಿ ಅಲ್ಲಿಂದ ಕರೆತರುವ ಕೆಲಸ ಮಾಡಿದೆ.
ಹಳೆ ಉಮರಾಣಿ ಗ್ರಾಮದ ಜನರಿಗೆ ಗ್ರಾಮ ಬಿಟ್ಟು ಬರುವ ಮನಸ್ಸು ಇರಲಿಲ್ಲ, ದನಕರುಗಳು, ಜಮೀನು ಬಿಡಲು ಸಿದ್ದರಿರಲಿಲ್ಲ. ಇದೇ ಕಾರಣಕ್ಜೆ ಈ ಹಿಂದೆ ಹೊಸ ಉಮರಾಣಿ ಗ್ರಾಮಕ್ಕೆ ಸ್ಥಳಾಂತರಗೊಂಡಿರಲಿಲ್ಲ. ಸದ್ಯ ಹೊಸ ಉಮರಾಣಿಯ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿಯೇ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ.