ವಿಜಯಪುರ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 2018–19ನೇ ಸಾಲಿನಲ್ಲಿ 50 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಚೇರಮನ್ ಎಸ್.ರವಿಚಂದ್ರನ್ ಹೇಳಿದರು.
ಬ್ಯಾಂಕ್ ವ್ಯವಹಾರದ ಕುರಿತು ಮಾತನಾಡುತ್ತಿರುವ ಚೇರ್ಮೆನ್ 2017–18ರ ಸಾಲಿನಲ್ಲಿ ನಡೆದ 432 ಕೋಟಿ ರೂಪಾಯಿ ವ್ಯವಹಾರದ ಮೇಲೆ ರೂ. 1825 ಕೋಟಿ ನಿವ್ವಳ ಲಾಭ ಗಳಿಸಿದ ಬ್ಯಾಂಕ್, 2018–19ನೇ ಸಾಲಿನಲ್ಲಿ ಶೇ.7.79 ಪ್ರತಿಶತ ದರದಲ್ಲಿ 25,257 ಕೋಟಿ ರೂಪಾಯಿ ವಹಿವಾಟು ನಡೆಸಿದ್ದು, ರೂ. 106 ಕೋಟಿ ನಿವ್ವಳ ಲಾಭದೊಂದಿಗೆ ರೂ. 50 ಕೋಟಿ ಲಾಭಗಳಿಸಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
9 ಜಿಲ್ಲೆಗಳಲ್ಲಿ 636 ಶಾಖೆಗಳನ್ನು ಹೊಂದಿರುವ ಬ್ಯಾಂಕ್ 2018–19ನೇ ಸಾಲಿನಲ್ಲಿ ಒಟ್ಟು 4,258 ಕೋಟಿ ಸಾಲ ವಿತರಿಸಲಾಗಿದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 1,18,867 ರೈತರಿಗೆ 2021 ಕೋಟಿ, ಸಣ್ಣ ಮತ್ತು ಮಧ್ಯಮ ತರಗತಿಯ ಉದ್ಯಮಕ್ಕೆ 1006 ಕೋಟಿ, ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ 65 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ 951 ಕೋಟಿ, ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ 709 ಫಲಾನುಭವಿಗಳಿಗೆ 64.18 ಕೋಟಿ ಸಾಲ ನೀಡಲಾಗಿದೆ ಎಂದರು.
ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಡಿ 16.59 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಅಸಂಘಟಿತ ವರ್ಗ ಮತ್ತು ಹಳ್ಳಿಗಾಡಿನ ಜನರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ ಮಹತ್ವದ ಪಾತ್ರ ವಹಿಸಿದ್ದು, ಈವರೆಗೆ 10.08 ಲಕ್ಷ ಜನರನ್ನು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು 3.75 ಲಕ್ಷ ಜನರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯ ವ್ಯಾಪ್ತಿಗೆ ತಂದಿದೆ.
ಅಟಲ್ ಪೆನ್ಶನ್ ಯೋಜನೆಯಡಿ ಪಿಂಚಣಿಗಾಗಿ 53,862 ಜನರನ್ನು ನೋಂದಣಿಗೊಳಪಡಿಸಲಾಗಿದೆ. ಬ್ಯಾಂಕಿನ ಕಾರ್ಯ ಪರಿಗಣಿಸಿ ಭಾರತೀಯ ಪಿಂಚಣಿ ಪ್ರಾಧಿಕಾರ ರಾಷ್ಟ್ರಮಟ್ಟದ ನಾಲ್ಕು ಪ್ರಶಸ್ತಿಗಳನ್ನು ನೀಡಿದೆ ಎಂದು ಹೇಳಿದರು.
2019–20ನೇ ಸಾಲಿನ ಗುರಿ:
2019–20ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕು 15 ಸಾವಿರ ಕೋಟಿ ಠೇವಣಿ ಮತ್ತು13 ಸಾವಿರ ಕೋಟಿ ಮುಂಗಡ ಮಟ್ಟವನ್ನು ತಲುಪುವ ಮೂಲಕ 28 ಸಾವಿರ ವಹಿವಾಟು ಮಾಡಿ, 250 ಕೋಟಿ ಕಾರ್ಯನಿರ್ವಹಣಾ ಲಾಭ ಮತ್ತು ಕನಿಷ್ಠ 50 ಕೋಟಿ ನಿಕ್ಕಿ ಲಾಭ ಗಳಿಸುವ ಗುರಿ ಹೊಂದಲಾಗಿದೆ.
ಕೃಷಿ, ಪ್ರವಾಸೋದ್ಯಮ ಒಳಗೊಂಡಂತೆ 10 ನೂತನ ಸಾಲ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳ ಜತೆಗೆ ಗೃಹ ಸಾಲ, ಸಣ್ಣ ಮತ್ತು ಮಧ್ಯಮ ತರಗತಿ ಕೈಗಾರಿಕೆ, ಕೃಷಿ ರಂಗದಲ್ಲಿ ಹೂಡಿಕೆ ಸಾಲಗಳಿಗೆ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ನಾರಾಯಣ ಯಾಜಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.