ಕಲಬುರಗಿ: ರಕ್ತ ಚರಿತ್ರೆಯ ಇತಿಹಾಸ ಹೊಂದಿರುವ ಭೀಮಾತೀರದಲ್ಲಿ ಇನ್ನೂ ಬಂದೂಕುಗಳು ಜೀವಂತವಾಗಿವೆ. ಇದೀಗ ಅಫಜಲಪುರದಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ ಜಾಲ ಪತ್ತೆಗಾಗಿದ್ದು ಆತಂಕ, ಭಯ ಉಂಟಾಗಿದೆ.
ಇಂಥದ್ದೊಂದು ಜಾಲವನ್ನು ಅಫಜಲಪುರ ಪೊಲೀಸರು ಖಚಿತ ಮಾಹಿತಿ ಆಧರಿಸಿ ಬೇಟೆಯಾಡಿದ್ದಾರೆ. ಸಿದ್ದಪ್ಪ, ಭೀಮಣ್ಣ, ಪರಸಯ್ಯ ಮತ್ತು ಸಲೀಂ ಬಂಧಿತರು. ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದ ಭೀಮಣ್ಣ ಪೂಜಾರಿ ಮತ್ತು ಸಿದ್ದಪ್ಪ ಡಿಗ್ಗಾವಿ ದಂಧೆಯ ಪ್ರಮುಖರು. ಭೀಮಣ್ಣ ಪೂಜಾರಿ ಅಫಜಲಪುರ ಪಟ್ಟಣದ ಬಸ್ ನಿಲ್ದಾಣದ ಬಳಿ ಪಿಸ್ತೂಲ್ ಇಟ್ಟುಕೊಂಡು ನಿಂತಿದ್ದಾಗ ಪೊಲೀಸರು ಸೆರೆ ಹಿಡಿದಿದ್ದಾರೆ.
ಭೀಮಣ್ಣ ಪೂಜಾರಿಯನ್ನು ತೀವ್ರ ವಿಚಾರಣೆ ನಡೆಸಿರುವ ಪೊಲೀಸರು ಬಳಿಕ ನಾಲ್ವರನ್ನು ಬಂಧಿಸಿದ್ದಾರೆ. ಸಿದ್ದಪ್ಪ ಡಿಗ್ಗಾವಿ ಮತ್ತು ಭೀಮಣ್ಣ ಪೂಜಾರಿ ಇಬ್ಬರು ಕಂಟ್ರಿ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದರು. ಇವರ ಬಳಿ ನಾಡ ಪಿಸ್ತೂಲ್ 50 ಸಾವಿರ ರೂ.ಗೆ ಖರೀದಿಸಿರುವ ಜೇವರ್ಗಿ ತಾಲ್ಲೂಕಿನ ಮಂದೆವಾಲ್ ಗ್ರಾಮದ ಸಲೀಂ ಶಿರಸಗಿ ಹಾಗೂ 65 ಸಾವಿರ ರೂ.ಗಳಿಗೆ ಖರೀದಿಸಿದ್ದ ಯಡ್ರಾಮಿ ತಾಲ್ಲೂಕಿನ ಮಳ್ಳಿ ಗ್ರಾಮದ ಪರಸಯ್ಯ ಗುತ್ತೇದಾರನನ್ನು ಪೊಲೀಸರು ಬಂಧಿಸಿದ್ದಾರೆ. 4 ನಾಡ ಪಿಸ್ತೂಲ್, 18 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.