ಕರ್ನಾಟಕ

karnataka

ETV Bharat / state

ರಸ್ತೆ ಪಕ್ಕದಲ್ಲಿ ಬಿದ್ದು ನರಳುತ್ತಿದ್ದ ಅನಾಥ.. ವೃದ್ಧನ ಕಷ್ಟಕ್ಕೆ ಮಿಡಿದ ಮುದ್ದೇಬಿಹಾಳದ ಜನ - ಸಲಾಂ ಭಾರತ ಟ್ರಸ್ಟ್

ಕಾಲಿಗೆ ಗ್ಯಾಂಗ್ರೀನ್​ ಆಗಿ ನಡೆಯಲು ಸಾಧ್ಯವಾಗದೇ ರಸ್ತೆ ಬದಿ ನರಳುತ್ತಿದ್ದ ಆಂಧ್ರ ಮೂಲದ ವೃದ್ಧನಿಗೆ ಮುದ್ದೇಬಿಹಾಳದ ಸಾಮಾಜಿಕ ಸಂಘಟನೆಯೊಂದು ಆಸ್ಪತ್ರೆಗೆ ಸೇರಿಸುವ ಮೂಲಕ ಅನಾಥ ವೃದ್ಧನ ಜೀವ ಉಳಿಸಿದೆ.

muddebihal people helps orphan old man
ಸಲಾಂ ಭಾರತ ಟ್ರಸ್ಟ್

By

Published : Jul 10, 2021, 8:14 AM IST

ಮುದ್ದೇಬಿಹಾಳ : ಕಾಲಿಗೆ ಗ್ಯಾಂಗ್ರೀನ್ ಆಗಿ ನಡೆಯಲು ಸಾಧ್ಯವಾಗದೇ ರಸ್ತೆಯ ಪಕ್ಕದಲ್ಲಿ ವೃದ್ಧನೋರ್ವ ಬಿದ್ದು ನರಳುತ್ತಿದ್ದ. ಈ ಅನಾಥನ ಪರಿಸ್ಥಿತಿ ತಿಳಿದ ಸಿಪಿಐ ಹಾಗೂ ಸಾಮಾಜಿಕ ಸಂಘಟನೆಗಳ ಯುವಕರು ಶುಕ್ರವಾರ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಆತನ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ತಂಗಡಗಿ ಗ್ರಾಮದ ಹೊರ ವಲಯದಲ್ಲಿ ಕಳೆದ ಹಲವು ದಿನಗಳಿಂದ ಆಂಧ್ರ ಪ್ರದೇಶ ಮೂಲದ ಪೆಂಟಯ್ಯ ಎಂಬಾತ ನರಳುತ್ತಾ ರಸ್ತೆಯ ಬದಿಯೇ ಬಿದ್ದಿದ್ದರು. ಇದನ್ನು ಕಂಡವರು ಆತನ ಕಾಲಿನ ಗಾಯ ನೋಡಿಯೇ ಆತನ ಬಳಿ ತೆರಳಲು ಹಿಂಜರಿಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಮುದ್ದೇಬಿಹಾಳದ ಉಪನ್ಯಾಸಕ ಶಿವು ಗಡೇದ ಮಾಧ್ಯಮದವರ ಗಮನಕ್ಕೆ ತಂದಿದ್ದರು.

ಅನಾಥ ವೃದ್ಧನಿಗೆ ನೆರವು

ನಂತರ ಪೊಲೀಸ್ ಇಲಾಖೆ ಹಾಗೂ ಸಲಾಂ ಭಾರತ ಟ್ರಸ್ಟ್ ಹಾಗೂ ಮುದ್ದೇಬಿಹಾಳದ ಶರಣು ಬೂದಿಹಾಳಮಠ ಫೌಂಡೇಶನ್‌ನ ಪದಾಧಿಕಾರಿಗಳು ತಂಗಡಗಿ ಗ್ರಾಮಕ್ಕೆ ತೆರಳಿ ವೃದ್ಧನನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ ಆನಂದ ವಾಘಮೋಡೆ ಅವರು, ವೃದ್ಧನನ್ನು ಪೊಲೀಸ್ ಇಲಾಖೆಯ ಸುಪರ್ದಿಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಸಲಾಂ ಭಾರತ ಟ್ರಸ್ಟ್ ಕಾರ್ಯದರ್ಶಿ ವಾಜೀದ್ ಹಡಲಗೇರಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಾವು ಕೊರೊನಾ ಶವಗಳನ್ನೇ ಸಾಗಿಸಿದ್ದೆವು. ಅಂತಹದ್ದರಲ್ಲಿ ಒಬ್ಬ ವ್ಯಕ್ತಿ ಜೀವ ಉಳಿಸಲು ಮುಂದಾಗಿ ನಾವು ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿದರು.

ಶರಣು ಬೂದಿಹಾಳಮಠ ಫೌಂಡೇಶನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ ಮಾತನಾಡಿ, ತಂಗಡಗಿ ಗ್ರಾಮದ ಕೆಲವರು ಅನಾಥ ವೃದ್ಧನಿಗೆ ಊಟ, ನೀರು ಕೊಟ್ಟಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಲಾಂ ಭಾರತ ಟ್ರಸ್ಟ್ ಉಪಾಧ್ಯಕ್ಷ ಜಿಲಾನಿ ಮಕಾನದಾರ ಅವರು, ಮಳೆಯಲ್ಲಿ ಒದ್ದೆಯಾಗಿ ನಡಗುತ್ತಿದ್ದ ವೃದ್ಧನಿಗೆ ತಾವು ತೊಟ್ಟಿದ್ದ ಜರ್ಕಿನ್‌ ಅನ್ನು ಹೊದಿಸಿ ಮಾನವೀಯತೆ ತೋರಿದರು.

ABOUT THE AUTHOR

...view details