ಕೋರ್ಟ್ಗೆ ಹಾಜರಾದ ಬೈರಗೊಂಡ, ಇತರರು ವಿಜಯಪುರ:ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿದ್ದ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಮತ್ತು ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರಗೊಂಡ ಗ್ಯಾಂಗ್ ಶುಕ್ರವಾರ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿತ್ತು. ಪ್ರಕರಣದಲ್ಲಿ ನಕಲಿ ಎನ್ಕೌಂಟರ್ ನಡೆಸಿದ್ದ ಆರೋಪ ಹೊತ್ತ ಅಂದಿನ ಚಡಚಣ ಪಿಎಸ್‌ಐ ಗೋಪಾಲ್ ಹಳ್ಳೂರ್ ಹಾಗೂ ಪ್ರಕರಣದ ಎ2 ಆರೋಪಿ ಹೊರತುಪಡಿಸಿ ಉಳಿದವರೆಲ್ಲರೂ ಕೋರ್ಟ್ಗೆ ಹಾಜರಾಗಿದ್ದರು.
ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದು, 6 ನೇ ಆರೋಪಿಯಾಗಿದ್ದ ಬಾಬು ಕಂಚನಾಳರ್ ಮೃತಪಟ್ಟಿದ್ದಾನೆ. ಉಳಿದ 15 ಮಂದಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದರು. ಮೊದಲ ಆರೋಪಿ ಮಹಾದೇವ ಬೈರಗೊಂಡ, ಅಂದಿನ ಚಡಚಣ ಸಿಪಿಐ ಮಲ್ಲಿಕಾರ್ಜುನ್ ಅಸೋಡೆ, ಹಣಮಂತ ಪೂಜಾರ ಹಾಗೂ ಮೂವರು ಪೊಲೀಸ್ ಕಾನ್ಸ್ಟೆಬಲ್ಗಳು ಬಂದಿದ್ದರು.
ಪ್ರಕರಣದ ಹಿನ್ನೆಲೆ:ಭೀಮಾ ತೀರದಲ್ಲಿ ಹಲವು ದಶಕಗಳಿಂದ ಚಡಚಣ ಹಾಗೂ ಬೈರಗೊಂಡ ಕುಟುಂಬಗಳ ನಡುವೆ ವೈರತ್ವ ಇತ್ತು. ಕಳೆದ 2017ರ ಅಕ್ಟೋಬರ್ 30 ರಂದು ಚಡಚಣ ಮಲ್ಲಿಕಾಜೀ ಮಕ್ಕಳಾದ ಧರ್ಮರಾಜ್ ಮೇಲೆ ಆಗಿನ ಚಡಚಣ ಪಿಎಸ್‌ಐ ಗೋಪಾಲ್ ಹಳ್ಳೂರ್ ಶಸ್ತ್ರಾಸ್ತ್ರ ತಪಾಸಣೆ ನೆಪದಲ್ಲಿ ಹೋಗಿ ಗುಂಡು ಹಾರಿಸಿದ್ದ ಆರೋಪ ಪ್ರಕರಣ ಇದಾಗಿದೆ. ಇತ್ತ ಆತನ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದ. ಅಂದಿನ ಬೆಳಗಾವಿ ಐಜಿಪಿಯಾಗಿದ್ದ ಅಲೋಕ್ ಕುಮಾರ್ ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದ್ದರು. ಈ ವೇಳೆ ಗಂಗಾಧರ ಸಹ ಹತ್ಯೆಯಾಗಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಈ ಎರಡು ಪ್ರಕರಣಗಳನ್ನು ಧರ್ಮರಾಜ್ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ನಿಗೂಢ ಹತ್ಯೆ ಎಂದು ಪರಿಗಣಿಸಿ ಸಿಐಡಿ ಕೂಡ ತನಿಖೆ ನಡೆಸಿ, ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು.
ಹತ್ತಾರು ಕಾರುಗಳಲ್ಲಿ ಆಗಮಿಸಿದ್ದ ಆರೋಪಿಗಳು:ಚಡಚಣ ಸಹೋದರರ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಮಹಾದೇವ ಬೈರಗೊಂಡ ಕೋರ್ಟ್ಗೆ ಹಾಜರಾಗಲು ಆಗಮಿಸಿದ್ದಾಗ ಆತನ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಜೊತೆಗೆ ಪ್ರಕರಣದ 15 ಆರೋಪಿಗಳೆಲ್ಲ ಕಾರುಗಳಲ್ಲೇ ಕೋರ್ಟ್ ಆವರಣಕ್ಕೆ ಬಂದಿದ್ದರು. ಮಹಾದೇವ ಬೈರಗೊಂಡ ಕೋರ್ಟ್ ಹಾಜರಾಗುವ ವೇಳೆ ಜನರು ಕೋರ್ಟ್ ಆವರಣದ ಸುತ್ತ ಸೇರಿದ್ದು ಕಂಡು ಬಂತು. ಈ ವೇಳೆ ಕೋರ್ಟ್ ಆವರಣದಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು.
ಓದಿ:ಚಿತ್ರದುರ್ಗದಲ್ಲಿ ಐವರ ಅಸ್ತಿಪಂಜರ ಪತ್ತೆ ಪ್ರಕರಣ: ಎಸ್ಪಿ ಹೇಳಿದ್ದೇನು?