ಮುದ್ದೇಬಿಹಾಳ :ಅ.15 ರಂದು ಶಾಲೆಗಳು ಆರಂಭವಾಗಲಿವೆ ಎಂಬ ಹಿನ್ನೆಲೆಯಲ್ಲಿ ತಾಲೂಕಿನ ಶಾಲಾ ಶಿಕ್ಷಕರಿಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.
ಸದ್ಯಕ್ಕೆ ಶಾಲೆಗಳು ಬಂದ್ ಆಗಿದ್ದು, ಶಿಕ್ಷಕರು ಮಕ್ಕಳ ಮನೆ ಮನೆಗಳಿಗೆ ತೆರಳಿ ಪಾಠ, ಅಧ್ಯಯನದ ಸಾಮಗ್ರಿ ಕೊಡುವ ವಿದ್ಯಾಗಮ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ.
ಆದರೆ ಅ.15 ರಂದು ಶಾಲೆಗಳು ಆರಂಭಗೊಳ್ಳಲಿವೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ತಾಲೂಕಿನ ಹಿರೇಮುರಾಳದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಂಗಮುರಾಳದ ಪ್ರೌಢಶಾಲೆಯ ಶಿಕ್ಷಕರಿಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ತಪಾಸಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ವೈದ್ಯ ಡಾ.ಸಿ.ಎಚ್.ನಾಗರಬೆಟ್ಟ ನೇತೃತ್ವದಲ್ಲಿ ಒಂಭತ್ತು ಜನ ಆರೋಗ್ಯ ಕಾರ್ಯಕರ್ತರು, ಇಬ್ಬರು ಆಶಾ ಕಾರ್ಯಕರ್ತರು ಶಿಕ್ಷಕರು, ಅಡುಗೆ ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಿದರು.