ಕರ್ನಾಟಕ

karnataka

ETV Bharat / state

ಗೋಕರ್ಣದಲ್ಲಿ ರಥಬೀದಿಗೂ ವಸ್ತ್ರಸಂಹಿತೆ: ವಿರೋಧದ ಮಧ್ಯೆ ಎಚ್ಚೆತ್ತ ಆಡಳಿತ

ಈ ಹಿಂದೆ ದೇವಸ್ಥಾನ ಪ್ರವೇಶಿಸುವ ಪುರುಷ ಭಕ್ತರಿಗೆ ಪಂಚೆ, ಶಲ್ಯ ಮಹಿಳೆಯರಿಗೆ ಸೀರೆ, ಚೂಡಿದಾರ ದಿರಿಸನ್ನು ಆಡಳಿತ ಮಂಡಳಿ ಕಡ್ಡಾಯ ಮಾಡಿತ್ತು. ಇದೀಗ ರಥ ಬೀದಿಯಿಂದ ಪಶ್ಚಿಮ ದ್ವಾರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧ ಹೇರಿ ನಾಮಫಲಕ ಹಾಕಿದ್ದಾರೆ.

Vastra Samhita also applied in Rathabeedi of Gokarna
ಗೋಕರ್ಣದಲ್ಲಿ ರಥಬೀದಿಗೂ ಬಂದ ವಸ್ತ್ರಸಂಹಿತೆ

By

Published : Nov 13, 2022, 8:48 AM IST

Updated : Nov 13, 2022, 10:12 AM IST

ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ನಿತ್ಯವೂ ಸಾವಿರಾರು ಮಂದಿ ಆಗಮಿಸುತ್ತಾರೆ. ಹೀಗೆ ಬಂದವರು ಆತ್ಮಲಿಂಗದ ದರ್ಶನ ಪಡೆಯಬೇಕೆಂದಿದ್ದರೆ ಪುರುಷರು ಪಂಚೆ, ಶಲ್ಯ ಧರಿಸಲೇಬೇಕು ಎಂದು ಆಡಳಿತ ಮಂಡಳಿ ಈ ಹಿಂದೆ ಸೂಚಿಸಿತ್ತು. ಇದರ ವಿರುದ್ಧ ಭಕ್ತರು ಅಸಮಾಧಾನಿಸುತ್ತಲೇ ಇದ್ದರು. ಇದರ ಬೆನ್ನಲ್ಲೇ ಇದೀಗ ಆಡಳಿತ ಮಂಡಳಿ ರಥ ಬೀದಿಗೂ ವಸ್ತ್ರಸಂಹಿತೆ ಜಾರಿಗೊಳಿಸಿದೆ.

ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗ ಸ್ಪರ್ಶಿಸಿ ಪುಣ್ಯ ಪಡೆಯುವುದಕ್ಕಾಗಿಯೇ ದೇಶ ವಿದೇಶದಿಂದಲೂ ಭಕ್ತರು ಆಗಮಿಸುತ್ತಾರೆ. ಹೀಗೆ ಬಂದವರು ಆತ್ಮಲಿಂಗದ ದರ್ಶನ ಪಡೆದು ಪುನೀತರಾಗುತ್ತಾರೆ. ಕಳೆದ ಕೆಲ ವರ್ಷದಿಂದ ದೇವಸ್ಥಾನದ ಆಡಳಿತ ಮಂಡಳಿ ಇದಕ್ಕಿರುವ ನಿಯಮಗಳನ್ನು ಆಗಾಗ ಬದಲು ಮಾಡುತ್ತಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಗೋಕರ್ಣದಲ್ಲಿ ರಥಬೀದಿಗೂ ಬಂದ ವಸ್ತ್ರಸಂಹಿತೆ

ಈ ಹಿಂದೆ ದೇವಸ್ಥಾನ ಪ್ರವೇಶಿಸುವ ಪುರುಷ ಭಕ್ತರಿಗೆ ಪಂಚೆ, ಶಲ್ಯ ಕಡ್ಡಾಯ ಮಾಡಿದ ಆಡಳಿತ ಮಂಡಳಿ ಮಹಿಳೆಯರಿಗೆ ಸೀರೆ, ಚೂಡಿದಾರ ಕಡ್ಡಾಯಗೊಳಿಸಿತ್ತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧಿಸಿ ನಾಮಫಲಕ ಹಾಕಿದೆ.

ಈ ನಿರ್ಧಾರಕ್ಕೆ ಸ್ಥಳೀಯರು, ಭಕ್ತರಿಂದ ಆಕ್ಷೇಪ ವ್ಯಕ್ತವಾಗಿದೆ. ಗೋಕರ್ಣದ ಮುಖ್ಯ ಕಡಲತೀರ ಸೇರಿದಂತೆ ಇತರೆ ಭಾಗಕ್ಕೂ ತೆರಳಬೇಕಿದ್ದರೆ ಇದೇ ರಸ್ತೆಯಲ್ಲಿಯೇ ಸಂಚರಿಸಬೇಕು. ಹೀಗಿರುವಾಗ ಸಾರ್ವಜನಿಕ ಪ್ರದೇಶಗಳಿಗೂ ವಸ್ತ್ರಸಂಹಿತೆ ನಿಯಮ ಜಾರಿಗೆ ತಂದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ದೇವಸ್ಥಾನದ ಒಳಭಾಗದಲ್ಲಿಯೂ ಕಳೆದ ಕೆಲ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ದೇವಾಲಯಕ್ಕೆ ಬರುವವರು ಎಲ್ಲರೂ ಪಂಚೆ ತರುವುದಿಲ್ಲ. ದೇವಾಲಯದಲ್ಲಿ ಖರೀದಿಸಲು ಬಡ ಭಕ್ತರಿಗೆ ಹೊರೆಯಾಗಲಿರುವ ಕಾರಣ ಕೂಡಲೇ ವಸ್ತ್ರ ಸಂಹಿತೆ ತೆರವುಗೊಳಿಸಬೇಕು ಎಂಬುದು ಭಕ್ತರ ಒತ್ತಾಯ. ಈ ಕುರಿತು ಸಮಿತಿಯ ಅಧ್ಯಕ್ಷರ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಬಾರದೇ ಸಮಿತಿ ಸದಸ್ಯರು ಮಾಡಿದ ತೀರ್ಮಾನದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದೇವಾಲಯದ ಎದುರಿನ ರಸ್ತೆ ಬಳಿ ಹಾಕಲಾಗಿದ್ದ ಬ್ಯಾನರ್​ಗಳನ್ನು ಕುಮಟಾ ತಹಶೀಲ್ದಾರರಿಗೆ ತೆರವುಗಳಿಸಲು ಕ್ರಮ‌ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಸಂಜೆ ವೇಳೆಗೆ ಬ್ಯಾನರ್​ಗಳನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ:ಶ್ರೀಕ್ಷೇತ್ರ ಕಟೀಲು ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿ..!

Last Updated : Nov 13, 2022, 10:12 AM IST

ABOUT THE AUTHOR

...view details