ಭಟ್ಕಳ (ಉತ್ತರ ಕನ್ನಡ): ಗೆಳೆಯರಿಬ್ಬರು ಒಟ್ಟಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಟ್ಕಳ ತಾಲೂಕಿನ ಕೈಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಒಬ್ಬ ಯುವಕ ಸಾವನ್ನಪ್ಪಿದ್ದು, ಇನ್ನೊಬ್ಬ ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ.
ಮೃತ ಯುವಕನನ್ನು ತಾಲೂಕಿನ ಕೈಕಿಣಿ ಮಠದಹಿತ್ತು ನಿವಾಸಿ ಗಿರೀಶ ಮಾರುತಿ ಮೊಗೇರ ಎಂದು ಗುರುತಿಸಲಾಗಿದೆ. ಕೈಕಿಣಿ ಮಠದಹಿತ್ತು ಮೂಲದ ಪ್ರಸ್ತುತ ಬಸ್ತಿಮಕ್ಕಿಯ ನಿವಾಸಿಯಾಗಿರುವ ಲೋಕರಾಜ ನಾಗರಾಜ ಮೊಗೇರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೈಕಿಣಿ ಗ್ರಾಮ ಪಂಚಾಯತ್ ಬಳಿ ಇಬ್ಬರೂ ಒಟ್ಟಿಗೆ ವಿಷ ಸೇವಿಸಿದ್ದರು. ವಿಷ ಸೇವನೆಗೆ ಸ್ಪಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೋಕರಾಜ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವ ಕಾರಣ, ಆತ ಚೇತರಿಸಿಕೊಂಡ ನಂತರವಷ್ಟೇ ಅಸಲಿ ವಿಷಯ ಹೊರ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮೃತ ಗಿರೀಶ ಮೊಗೇರ ಚಿಕ್ಕಪ್ಪ ಗಣೇಶ ಈರಪ್ಪ ಮೊಗೇರ ಪೊಲೀಸರಿಗೆ ದೂರು ನೀಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಉಜಿರೆ: ಮಗನಿಗೆ ಚೂರಿ ಇರಿದು ಕೊಂದ ತಂದೆ
ನೇತ್ರಾವತಿ ನದಿಯಲ್ಲಿ ಚಿಕ್ಕಮಗಳೂರು ವ್ಯಕ್ತಿ ಆತ್ಮಹತ್ಯೆ?: ಇನ್ನೊಂದೆಡೆ,ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವರ ಪುತ್ರ ಪ್ರಸನ್ನ ಕುಮಾರ್ (40) ನೇತ್ರಾವತಿ ನದಿಗೆ ಹಾರಿದ್ದಾರೆ. ಸೊಪ್ಪು ವ್ಯಾಪಾರ ಮಾಡುತ್ತಿದ್ದ ಪ್ರಸನ್ನ ಕುಮಾರ್ ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ಕೊತ್ತಂಬರಿ ಸೊಪ್ಪು ಸರಬರಾಜು ಮಾಡುತ್ತಿದ್ದರು.
ವ್ಯಾಪಾರ ಮಾಡಿದ ಸೊಪ್ಪಿನ ಹಣ ವಸೂಲಿ ಮಾಡುವುದಕ್ಕಾಗಿ ಸೋಮವಾರ ಬೆಳಗ್ಗೆ ಮನೆಯಿಂದ ಪ್ರಸನ್ನ ಕುಮಾರ್ ಮಂಗಳೂರಿಗೆ ಬಂದಿದ್ದರು. ಆ ಬಳಿಕ ನೇತ್ರಾವತಿ ನದಿ ಬಳಿ ಕಾರು ನಿಲ್ಲಿಸಿ ಮಾಧ್ಯಾಹ್ನ 1 ಗಂಟೆಯ ಸುಮಾರಿಗೆ ನೇತ್ರಾವತಿ ನದಿಗೆ ಹಾರಿದ್ದರು. ಈ ಬಗ್ಗೆ ಸ್ಥಳೀಯರು ಅನುಮಾನಗೊಂಡು ಕಾರಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಆರ್ಥಿಕವಾಗಿ ಉತ್ತಮವಾಗಿದ್ದರೆನ್ನಲಾದ ಪ್ರಸನ್ನ ಕುಮಾರ್ ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿಸಿದ್ದರು. ಅವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ನದಿ ಹಾರಲು ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಪ್ರಸನ್ನ ಕುಮಾರ್ ಪತ್ತೆಗಾಗಿ ಸೋಮವಾರ ಸಂಜೆವರೆಗೂ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಸಿದರು. ಪತ್ತೆಯಾಗದ ಹಿನ್ನೆಲೆಯಲ್ಲಿ ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮಂಗಳವಾರ ಮತ್ತೆ ಹುಡುಕಾಟ ಮುಂದುವರೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.