ಮತ್ಸ್ಯ ಶಿಕಾರಿಗೆ ಸಜ್ಜಾದ ಕಡಲ ಮಕ್ಕಳು ಕಾರವಾರ (ಉತ್ತರ ಕನ್ನಡ):ಕಳೆದ ಎರಡು ತಿಂಗಳಿಂದ ಆಳ ಸಮುದ್ರ ಮೀನುಗಾರಿಕೆಗೆ ಹೇರಿದ್ದ ನಿರ್ಬಂಧ ನಾಳೆ ತೆರವುಗೊಳ್ಳಲಿದೆ. ಸುದೀರ್ಘ ಬಿಡುವಿನ ಬಳಿಕ ಹೊಸ ಋತುಮಾನದ ಮೊದಲ ಮತ್ಸ್ಯ ಬೇಟೆಗೆ ಕಡಲಮಕ್ಕಳು ಸಜ್ಜಾಗಿದ್ದು, ಮೀನುಗಾರಿಕೆಗೆ ಅನುಕೂಲಕರ ವಾತಾವರಣವಿರುವುದು ಕೂಡ ಇದೀಗ ಮೀನುಗಾರರ ಉತ್ಸಾಹ ಇಮ್ಮಡಿಗೊಳ್ಳುವಂತೆ ಮಾಡಿದೆ.
ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಕಾರಣ ಜೂನ್ 1 ರಿಂದ ಎರಡು ತಿಂಗಳು ಕಾಲ ಆಳ ಸಮುದ್ರ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಆದರೆ ಆ.1 ರಿಂದ ನಿರ್ಬಂಧ ತೆರವುಗೊಳ್ಳಲಿದ್ದು, ಬಿಡುವಿನ ಅವಧಿಯಲ್ಲಿ ಬೋಟ್‌ಗಳ ಎಂಜಿನ್ ಸರ್ವೀಸ್, ಮುರಿದು ಹೋಗಿದ್ದ ಹಲಗೆಗಳ ಬದಲಾವಣೆ, ಬಲೆಗಳ ದುರಸ್ತಿ, ಹೊಸ ಬಲೆಗಳ ಖರೀದಿ, ಬೋಟ್‌ಗಳಿಗೆ ಬಣ್ಣ ಬಳಿದು ಸ್ವಚ್ಛಗೊಳಿಸುವುದು, ಪರವಾನಗಿ ನವೀಕರಣ, ಡೀಸೆಲ್ ಪಾಸ್ ಪುಸ್ತಕ, ಮೀನುಗಾರಿಕೆಗೆ ಆರಂಭಿಕ ಬಂಡವಾಳ ಕ್ರೂಢೀಕರಣ ಸೇರಿದಂತೆ ಮೀನುಗಾರಿಕೆಗೆ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.
ಮಾತ್ರವಲ್ಲದೆ ಬೋಟ್‌ನಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಕಾರ್ಮಿಕರು ಬಂದರುಗಳತ್ತ ಮುಖ ಮಾಡಿದ್ದಾರೆ. ಬೋಟ್‌ಗಳ ರಿಪೇರಿ ಕಾರ್ಯದ ಬಳಿಕ ಸುಣ್ಣ ಬಣ್ಣ ಬಳಿದು ತೋರಣಗಳಿಂದ ಶೃಂಗರಿಸಿ, ಹೋಮ ಹವನ ನಡೆಸಲಾಗುತ್ತಿದೆ. ಜೊತೆಗೆ ಎರಡು ತಿಂಗಳುಗಳ ಕಾಲ ಮನೆಗಳಲ್ಲಿ ಸಂಗ್ರಹಿಸಿದ್ದ ಮೀನುಗಾರಿಕಾ ಸಲಕರಣೆ-ಸಾಮಗ್ರಿಗಳನ್ನು ಬೋಟ್‌ಗೆ ತುಂಬಿಸುವ ಕಾರ್ಯವನ್ನು ಕಾರ್ಮಿಕರು ಮಾಡುತ್ತಿದ್ದಾರೆ.
ಎರಡು ತಿಂಗಳ ನಿರ್ಬಂಧದ ಅವಧಿ ಮುಕ್ತಾಯವಾಗಿದೆ. ಬೋಟ್ ಬಲೆ ರಿಪೇರಿ ಕೂಡ ಆಗಿದ್ದು, ವಾತಾವರಣ ಕೂಡ ಉತ್ತಮವಾಗಿದೆ. ಕಳೆದ ಮೂರು ವರ್ಷದಿಂದ ಕೈಗೂಡದ ಮೀನುಗಾರಿಕೆ ಈ ಬಾರಿಯಾದರೂ ಮೀನುಗಾರರಿಗೆ ಆಗುವ ನಿರೀಕ್ಷೆ ಇದೆ. ಟ್ರಾಲ್ ಬೋಟ್‌ಗಳು ಆ.1 ರಿಂದ ತೆರಳಲಿದ್ದು, ಪರ್ಸಿಯನ್ ಬೋಟ್‌ಗಳು ಆ. 6ರ ಬಳಿಕ ತೆರಳಲಿವೆ ಎಂದು ಟ್ರಾಲರ್ ಬೋಟ್ ಮಾಲೀಕ ಶ್ರೀಧರ ಹರಿಕಂತ್ರ ತಿಳಿಸಿದರು.
ನರಸಿಂಹ ದೇವರಿಗೆ ಪೂಜೆ ಬಳಿಕ ಮೀನುಗಾರಿಕೆ:ಇನ್ನು ಪ್ರತಿ ಬಾರಿ ನಿಷೇಧದ ಬಳಿಕ ಆರಂಭವಾಗುವ ಮೀನುಗಾರಿಕೆಗೂ ಮೊದಲು ಸಮುದ್ರ ಮಧ್ಯದ ಕೂರ್ಮಗಡ ದ್ವೀಪದಲ್ಲಿ ನೆಲೆಸಿರುವ ನರಸಿಂಹಸ್ವಾಮಿ ದೇವರಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಎಲ್ಲ ಬೋಟ್‌ಗಳು ದ್ವೀಪ ಸುತ್ತಿ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕವೇ ಮೀನುಗಾರಿಕೆಗೆ ತೆರಳುವುದು ಮೀನುಗಾರರ ವಾಡಿಕೆಯಾಗಿದೆ.
ಮೀನುಗಾರಿಕೆ ವೇಳೆಗೆ ಬಂದಾದ ರಪ್ತು:ಕಡಲ ಮಕ್ಕಳು ಮೀನುಗಾರಿಕೆಗೆ ಅಂತಿಮ ಹಂತದ ಸಿದ್ಧತೆ ನಡೆಸಿದ್ದು ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲಿಯೂ ಆರಂಭದಲ್ಲಿ ಶೆಟ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಾರಿಕೆ ಆಗುವುದರಿಂದ ಮೀನುಗಾರರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ವಿದೇಶಗಳಿಗೆ ರಪ್ತಾಗುತ್ತಿದ್ದ ಮೀನು, ಶೆಟ್ಟಿ ಪ್ರಮಾಣ ಕಡಿಮೆಯಾಗಿದ್ದರಿಂದ ಇದೀಗ ಖರೀದಿ ಕೂಡ ಕಡಿಮೆಯಾಗಿದೆ. ಇದರಿಂದ ಮೀನುಗಾರಿಕೆ ಅವಧಿಯಲ್ಲಿ ಬೆಲೆ ಕೂಡ ಕುಸಿತವಾಗಿದೆ. ಹೀಗಾದಲ್ಲಿ ಮೀನುಗಾರಿಕೆಯಾದರೂ ಕೂಡ ಈ ದುಬಾರಿ ಬೆಲೆಯ ನಡುವೆ ಮೀನುಗಾರರಿಗೆ ಲಾಭ ಸಿಗುವುದು ಕಷ್ಟ ಎನ್ನುತ್ತಾರೆ ಮೀನುಗಾರ ಚೇತನ್ ಹರಿಕಂತ್ರ.
ಇದನ್ನೂ ಓದಿ:ಕಾರವಾರ: ಬಲೆಗೆ ಬಿದ್ದ ಬೃಹತ್ ಗಾತ್ರದ ಕುರುಡೆ ಮೀನು; ಜನವಸತಿ ಪ್ರದೇಶದಲ್ಲಿ ಮುಳ್ಳಂದಿ ಮರಿ ರಕ್ಷಣೆ