ಕರ್ನಾಟಕ

karnataka

ETV Bharat / state

ಕಾರ್ಗಿಲ್ ಯುದ್ಧದ ಸ್ಮರಣೆ: 3 ಗುಂಡು ತಲೆಗೆ ಹೊಕ್ಕರೂ ಶತ್ರುಗಳನ್ನು ಬೇಟೆಯಾಡಿದ್ದ ಕಾರವಾರದ ಯೋಧ! - Karwar warrior

ಪಾಕ್‌ ಸೈನಿಕರು ವಶಪಡಿಸಿಕೊಂಡಿದ್ದ ಕಾರ್ಗಿಲ್‌ ಪ್ರದೇಶವನ್ನು ಭಾರತೀಯ ಯೋಧರು ಮರುವಶಪಡಿಸಿಕೊಂಡು ಗೆದ್ದು ಬೀಗಿದ ದಿನವಿದು. ಅವರ ಪ್ರಾಣತ್ಯಾಗ, ಕೆಚ್ಚೆದೆಯ ಹೋರಾಟ ನಮ್ಮೆಲ್ಲರಿಗೂ ಸ್ಫೂರ್ತಿ. ಸಂಭ್ರಮದ ಈ ದಿನಕ್ಕೆ ಇಂದಿಗೆ 20 ವರ್ಷ. ಈ ಯದ್ಧದಲ್ಲಿ ತಲೆಗೆ ಮೂರು ಗುಂಡುಗಳು ಹೊಕ್ಕರೂ ವೈರಿಗಳನ್ನು ಸದೆಬಡಿದ ಕಾರವಾರ ಯೋಧನ ಪರಾಕ್ರಮದ ಸ್ಟೋರಿ ಇಲ್ಲಿದೆ...

ಮಾಕಾಂತ ಮುಕುಂದ ಸಾವಂತ್​

By

Published : Jul 26, 2019, 7:54 AM IST

ಕಾರವಾರ: ಅವರು ದೇಶದ ಹೆಮ್ಮೆಯ ಪುತ್ರ. 1999ರಲ್ಲಿ ಪಾಪಿ ಪಾಕಿಸ್ತಾನದ ವಶವಾಗುತ್ತಿದ್ದ ಕಾರ್ಗಿಲ್ ಪ್ರದೇಶದ ಉಳಿಸಿಕೊಳ್ಳಲು ಶತ್ರುಗಳ ಗುಂಡಿಗೆ ಎದೆಯೊಡ್ಡಿ ಹೋರಾಡಿದ ಧೀರ. ಮೂರು ಗುಂಡುಗಳು ತಲೆಗೆ ಹೊಕ್ಕರೂ ತಂಡದೊಂದಿಗೆ ಮೂವರು ಶತ್ರುಗಳನ್ನು ಹೊಡೆದುರುಳಿಸಿದ ಅವರು ಕಾರ್ಗಿಲ್ ಯುದ್ಧದ ವೇಳೆ ಸಾವನ್ನೇ ಗೆದ್ದು ಬಂದ ವೀರ ಯೋಧನ ಕಥೆ ಇದು.

ಹೌದು, ಕಾರವಾರ ತಾಲೂಕಿನ ಮಾಂಡೆಬೋಳದ ರಮಾಕಾಂತ ಮುಕುಂದ ಸಾವಂತ್​ ಅವರು, ಕಾರ್ಗಿಲ್ ಯುದ್ಧದ ವೇಳೆ ಸಾವನ್ನೇ ಗೆದ್ದು ಬಂದ ಪರಾಕ್ರಮಿ. ದೇಶಾದ್ಯಂತ ಇಂದು 20ನೇ ವರ್ಷದ ಕಾರ್ಗಿಲ್ ವಿಜಯ್​ ದಿವಸ್​​ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಾವಂತ್​ ಅವರಂತಹ ಧೀರ ಪುತ್ರರನ್ನು ದೇಶದ ಜನ ಕೊಂಡಾಡುತ್ತಿದ್ದಾರೆ. ರಮಾಕಾಂತ ಅವರ ಸಾಹಸಗಾಥೆ ದೇಶವೇ ಹೆಮ್ಮೆ ಪಡುವಂತಿದೆ.

ಆ ದಿನದ ಕಾರ್ಯಾಚರಣೆ ಹೀಗಿತ್ತು...!

1983 ರಲ್ಲಿ ಸೇನೆಗೆ ಸೇರಿದ ರಮಾಕಾಂತ್​ ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಅಂಡಮಾನ್ ಮತ್ತು ನಿಕೋಬಾರ್ ಸೇರಿದಂತೆ ಇತರ ಕಡೆ ಸೇವೆ ಸಲ್ಲಿಸಿ 1998ರಲ್ಲಿ ಮತ್ತೆ ಕಾರ್ಗಿಲ್​​ಗೆ ಬಂದಿದ್ದರು. ಆದರೆ, ಬಂದ ಮರು ವರ್ಷವೇ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಯಾಗಿತ್ತು. ದಿನವಿಡೀ ಕಾರ್ಯಾಚರಣೆಯಲ್ಲಿರುತ್ತಿದ್ದ ಅವರಿಗೆ ಊಟ, ನಿದ್ರೆ ಸಹ ಇರುತ್ತಿರಲಿಲ್ಲವಂತೆ. ಕೆಲವು ವೇಳೆ ಒಂದೇ ಒಂದು ಬಿಸ್ಕೆಟ್ ಪೊಟ್ಟಣದಲ್ಲಿ ವಾರ ಕಳೆದ ಉದಾಹರಣೆ ಕೂಡ ಇದೆಯಂತೆ.

ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ ಕಾರವಾದ ಯೋಧ ರಮಾಕಾಂತ ಮುಕುಂದ ಸಾವಂತ್

1999 ಮೇ 21 ರಂದು ಹವಾಲ್ದಾರ್​ ನಾಯಕ್ ಜೊತೆ 13 ಜನ ಸೈನಿಕರು ದೋಢಾ ಜಿಲ್ಲೆಯ ಗುಡ್ಡದಲ್ಲಿ ಐವರು ಉಗ್ರರು ಅಡಗಿರುವ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆಗೆ ಇಳಿದು ಬೆಟ್ಟ ಏರುತ್ತಿದ್ದಂತೆ ಮೂವರನ್ನು ಹೊಡೆದುರುಳಿಸಿದೆವು.ನಾನು ಮುಂದಾಳತ್ವ ತೆಗೆದುಕೊಂಡು ಮುನ್ನುಗ್ಗಿದ್ದೆ. ಆದರೆ, ತಲೆಯಿಂದ ಜಾರಿದ ಹೆಲ್ಮೆಟ್ ಎತ್ತಿಕೊಳ್ಳುವಾಗ ಉಗ್ರರ ಮೂರು ಗುಂಡುಗಳು ತಲೆಗೆ ಹೊಕ್ಕಿದ್ದವು. ಒಂದು ಕ್ಷಣ ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ಬಳಿಕ ಅಲ್ಲಿಯೇ ಕುಸಿದು ಬಿದ್ದಿದ್ದೆ ಎಂದು ಅಂದಿನ ಯುದ್ಧದ ಸನ್ನಿವೇಶವನ್ನು ತೆರೆದಿಟ್ಟರು ವೀರ ಯೋಧ ರಮಾಕಾಂತ್​.

ಸಾವನ್ನಪ್ಪಿದ್ದಾರೆಂದು ಕಟ್ಟಿಗೆ ಸಹ ಸಂಗ್ರಹಿಸಿದ್ದರು!

ನನ್ನ ಸ್ಥಿತಿ ನೋಡಿದ ಅಧಿಕಾರಿಗಳು ಕೂಡ ಬದುಕುಳಿಯುವುದು ಕಷ್ಟ ಎಂದು ಶವ ಪೆಟ್ಟಿಗೆ ಸಿದ್ಧಪಡಿಸಿದ್ದರು. ಇತ್ತ ಊರಿನಲ್ಲಿಯೂ ಸಾವನ್ನಪ್ಪಿದ ಸುದ್ದಿ ಹಬ್ಬಿತ್ತು. ಕಟ್ಟಿಗೆ ಸಹ ರೆಡಿ ಮಾಡಿದ್ದರು. ಆದರೆ, ನಾನು ಬದುಕಿದ್ದೆ. ನನಗೆ 21 ದಿನಗಳ ಕಾಲ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಯಿತು. ಬಳಿಕ ಎಚ್ಚರವಾದಾಗ ನನ್ನಂತೆಯೇ ಹಲವು ದೊಡ್ಡ ಅಧಿಕಾರಿಗಳು ಹಾಗೂ ಸೈನಿಕರು ಗಾಯಗೊಂಡಿದ್ದರು. ಬಳಿಕ ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಗುಣಮುಖವಾಗಿ ಊರಿಗೆ ಬಂದಾಗ ಅಚ್ಚರಿಯೇ ಎದುರಾಗಿತ್ತು. ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು ಎನ್ನುತ್ತಾರೆ ರಮಾಕಾಂತ್​.

ಇನ್ನು ಮಾಂಡೆಬಾಳ ಗ್ರಾಮದಲ್ಲಿ ಸಾಕಷ್ಟು ಯೋಧರು ದೇಶ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇಂತದರಲ್ಲಿ ಅವರು ದೇಶ ಸೇವೆಯಲ್ಲಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಬಂದಿತ್ತು. ಆದರೆ, ಬಳಿಕ ಬದುಕಿರುವ ಸುದ್ದಿ ತಿಳಿದು ಖುಷಿಯಾಯಿತು. ಇದೀಗ ಆರೋಗ್ಯವಾಗಿದ್ದಾರೆ. ಅಲ್ಲದೆ ಮಾಕಾಂತ್ ಅವರಿಗೆ ಮೂರು ಗುಂಡು ತಾಗಿದರೂ ಸಾವನ್ನೇ ಗೆದ್ದು ಬಂದಿದ್ದಾರೆ. ಅವರ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ ಸ್ಥಳೀಯರು.

ಸೌಲಭ್ಯ ಕಲ್ಪಿಸಲು ಮರೆತ ಸರ್ಕಾರ:

ದೇಶಕ್ಕಾಗಿ ಹೋರಾಡಿದ ನನಗೆ ಸೇನೆಯಿಂದ ಎಲ್ಲವೂ ಸಿಕ್ಕಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕಳೆದ ವರ್ಷ ಹೋರಾಟ ಮಾಡಿದ ಫಲವಾಗಿ ಕಾರವಾರದ ಸಾವಂತವಾಡದ ಆರವ್ ಎಂಬಲ್ಲಿ ಒಂದು ಎಕರೆ ಭೂಮಿ ಮಂಜೂರಿ ಮಾಡಲಾಗಿದೆ. ಆದರೆ, ಇದೇ ಜಾಗದಲ್ಲಿ ಇನ್ನೂ ಇಬ್ಬರಿಗೆ ತಲಾ ಒಂದು ಎಕರೆ ನೀಡಿದ್ದು, ಇನ್ನು ಕೂಡ ಗಡಿ ಗುರುತು ಮಾಡಿಕೊಟ್ಟಿಲ್ಲ. ಇದರಿಂದ ಕೊಟ್ಟ ಭೂಮಿ ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ನಮ್ಮದಾಗಿದ್ದು ಕೂಡಲೇ ಈ ಬಗ್ಗೆ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎನ್ನುತ್ತಾರೆ ರಮಾಕಾಂತ್​.

ABOUT THE AUTHOR

...view details