ಕಾರವಾರ: ಕರಾವಳಿಯಲ್ಲಿ ರೆಡ್ ಅಲರ್ಟ್ ಮುನ್ಸೂಚನೆ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ. ರಾತ್ರಿಯಿಡಿ ಸುರಿದ ಧಾರಾಕಾರ ಮಳೆ ಜಿಲ್ಲೆಯಾದ್ಯಂತ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಒಂದೆಡೆ ಹೆದ್ದಾರಿ ಮೇಲೆ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದರೆ, ಇನ್ನೊಂದೆಡೆ ತಗ್ಗು ಪ್ರದೇಶದಲ್ಲಿ ಮನೆ, ತೋಟಗಳಿಗೆ ನೀರು ನುಗ್ಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಧಾರಾಕಾರ ಮಳೆಯಿಂದ ತಾಲೂಕಿನ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ ಅಕ್ಷರಶಃ ನದಿಯಂತಾಗಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಇದೆ. ಬಿಣಗಾ ಬಳಿ ನೌಕಾನೆಲೆ ಕಾಮತ್ ಗೇಟ್ ಭಾಗದಲ್ಲಿ ಭಾರಿ ಮಳೆಯಿಂದಾಗಿ ಹಳ್ಳವೊಂದು ತುಂಬಿ ಹೆದ್ದಾರಿ ಮೇಲೆ ಹರಿದಿದೆ. ಹೆದ್ದಾರಿಯ ಸುಮಾರು 100 ಮೀ.ವರೆಗೆ ನೀರು ನಿಂತಿದ್ದು, ಪರಿಣಾಮ ವಾಹನಗಳು ಸಂಚರಿಸಲು ಸಾಧ್ಯವಾಗದೆ ರಸ್ತೆಯ ಮೇಲೆಯೇ ನಿಲ್ಲುವಂತಾಯಿತು. ಇದರಿಂದಾಗಿ ಬೆಳಗಿನ ವೇಳೆ ಕಾರವಾರದಿಂದ ನೌಕಾನೆಲೆ ಸೇರಿದಂತೆ ವಿವಿಧೆಡೆ ಕೆಲಸಕ್ಕೆಂದು ಬೈಕ್‌ನಲ್ಲಿ ತೆರಳುವವರು ಪರದಾಡಿದ್ದಾರೆ.
ಕಾರವಾರದಲ್ಲಿ ಮಳೆ ಆರ್ಭಟ: ಮನೆ-ತೋಟಗಳಿಗೆ ನುಗ್ಗಿದ ನೀರು ಸ್ಥಳೀಯರ ಆಕ್ರೋಶ:ಹೆದ್ದಾರಿ ಸಮೀಪದಲ್ಲಿನ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಮಳೆ ಬಂದ ಸಂದರ್ಭದಲ್ಲಿ ಈ ರೀತಿ ನೀರು ನಿಲ್ಲುತ್ತಿರಲಿಲ್ಲ. ಇದೀಗ ನೌಕಾನೆಲೆ ಎರಡನೇಯ ಹಂತದ ಕಾಮಗಾರಿಗಾಗಿ ಕಂಪೌಂಡ್ ನಿರ್ಮಿಸಿದ್ದರಿಂದ ನೀರು ಹರಿದುಹೋಗದೇ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಟಾ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ:ತಡರಾತ್ರಿಯಿಂದ ಎಡಬಿಡದೇ ಸುರಿದ ಮಳೆಯ ಪರಿಣಾಮ ಜಿಲ್ಲೆಯ ಶರಾವತಿ, ಗಂಗಾವಳಿ, ಅಘನಾಶಿನಿ, ಬಡಗಣಿ ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ಕುಮಟಾ ತಾಲೂಕಿನ ಊರುಕೇರಿ, ಬಡಗಣಿ, ಹೆಗಡೆ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಹೊನ್ನಾವರ ತಾಲೂಕಿನ ಗುಂಡಬಾಳ, ಹಡಿನಬಾಳ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯರು ನೆರೆಯಲ್ಲಿ ಸಿಲುಕಿದ್ದ ಜನರನ್ನ ಬೋಟ್ ಮೂಲಕ ರಕ್ಷಣೆ ಮಾಡಿ ಕರೆತಂದಿದ್ದಾರೆ.
ಈಗಾಗಲೇ ಕಾರವಾರ, ಕುಮಟಾ ಹಾಗೂ ಹೊನ್ನಾವರ ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದ್ದು, ಮಳೆಯಿಂದ ಸಂಕಷ್ಟಕ್ಕೊಳಗಾದವರಿಗೆ ಆಶ್ರಯ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಈ ಬಾರಿಯೂ ಮಳೆಯಿಂದಾಗಿ ನೆರೆ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹಿನ್ನೆಲೆ ಈಗಾಗಲೇ ಎಸ್‌ಡಿಆರ್‌ಎಫ್ ತಂಡದ 10 ಮಂದಿ ಸದಸ್ಯರು ಜಿಲ್ಲೆಯಲ್ಲಿದ್ದಾರೆ. ಇನ್ನೂ 11 ಮಂದಿ ಬೆಳಗಾವಿಯಿಂದ ಆಗಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಒಟ್ಟು 40 ಮಂದಿ ಎಸ್‌ಡಿಆರ್‌ಎಫ್ ತಂಡದ ಸದಸ್ಯರು ಜಿಲ್ಲೆಯಲ್ಲಿ ತುರ್ತು ಕಾರ್ಯಾಚರಣೆಗೆ ಲಭ್ಯ ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಈಗಾಗಲೇ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆ ಕಾರವಾರ ತಾಲೂಕಿನ ಕದ್ರಾ ಜಲಾಶಯದಿಂದ ಇಂದು ಒಟ್ಟು 28,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಜಲಾಶಯದ ಗರಿಷ್ಠ ಸಾಮರ್ಥ್ಯ 34.50 ಮೀ. ಇದ್ದು ಸದ್ಯ 30.50 ಮೀ. ಆಸುಪಾಸಿನಲ್ಲಿ ಜಲಾಶಯದ ಮಟ್ಟವನ್ನ ಕಾಯ್ದುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಈ ಮೂಲಕ ಜಲಾಶಯದಿಂದ ಉಂಟಾಗಬಹುದಾದ ಕೃತಕ ನೆರೆ ಪರಿಸ್ಥಿತಿಯನ್ನ ನಿಯಂತ್ರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಇದನ್ನೂ ಓದಿ:ಸೇತುವೆ ಇಲ್ಲದೇ ಪದ್ಮಶ್ರೀ ತುಳಸಿ ಗೌಡ ಪರದಾಟ : ಮುಖ್ಯಮಂತ್ರಿಗೆ ಮನವಿ