ಕರ್ನಾಟಕ

karnataka

ETV Bharat / state

ಅಕೇಶಿಯಾ ಬದಲು ವೈವಿಧ್ಯಮಯ ಗಿಡ ನೆಡಿ: ಮೂರೂರು ಗ್ರಾಮಸ್ಥರ ಆಗ್ರಹ

ಪರಿಸರಕ್ಕೆ ಮಾರಕವಾಗಿರುವ ಅಕೇಶಿಯಾ ಬದಲು ಸಾಂಪ್ರದಾಯಿಕ ಗಿಡಗಳನ್ನು ನೆಡಲು ಸೂಚಿಸುವಂತೆ ಮೂರೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಕೇಶಿಯಾ ಬದಲು ವೈವಿಧ್ಯಮಯ ಗಿಡ ನೆಡಿ

By

Published : Jul 9, 2019, 10:58 PM IST

ಕಾರವಾರ:ಪರಿಸರಕ್ಕೆ ಮಾರಕವಾದ ಅಕೇಶಿಯಾ ಗಿಡಗಳ ಬದಲು ಇತರೆ ಸಾಂಪ್ರದಾಯಿಕ ಹಾಗೂ ವೈವಿಧ್ಯಮಯ ಗಿಡಗಳನ್ನು ನೆಡುವಂತೆ ಕುಮಟಾ ತಾಲ್ಲೂಕಿನ ಮೂರೂರು ಹಾಗೂ ಕಲ್ಲಬ್ಬೆ ಭಾಗದ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಮೂರೂರು, ಕಲ್ಲಬ್ಬೆ ಸೇರಿದಂತೆ ಸುತ್ತಮುತ್ತಲಿನ ಭಾಗದ ಜನರು ಸಾಂಪ್ರದಾಯಿಕ ಬೆಳೆಗಳಾದ ಭತ್ತ, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಉಪ ಬೆಳೆಗಳನ್ನು ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ದರಗಲು, ಸೊಪ್ಪನ್ನು ಬಳಸಿಕೊಂಡು ಅನಾದಿಕಾಲದಿಂದಲೂ ಜೀವನ ಸಾಗಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಖಾಲಿ ಜಾಗದಲ್ಲಿ ಅಕೇಶಿಯಾವನ್ನು ನೆಡಲು ಮುಂದಾಗಿದ್ದಾರೆ.ಆದರೆ ಇದು ಅತಿ ಹೆಚ್ಚು ನೀರನ್ನು ಹೀರಿಕೊಳ್ಳುವ ಮತ್ತು ಪರಿಸರಕ್ಕೆ ಹಾಗೂ ಮಣ್ಣಿಗೂ ಮಾರಕವಾಗಿದೆ. ಈ ಗಿಡಗಳನ್ನು ನೆಡುವ ಬದಲು ಕಾಡು ಜಾತಿಯ ಇಲ್ಲವೇ ಹಣ್ಣು ಮತ್ತು ಔಷಧಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಜನರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಅಕೇಶಿಯಾ ಬದಲು ವೈವಿಧ್ಯಮಯ ಗಿಡ ನೆಡಿ

ಬಳಿಕ ಮಾತನಾಡಿದ ಸ್ಥಳೀಯರಾದ ಎಂಜಿ ಭಟ್ಟ, ಅಕೇಶಿಯಾ ಗಿಡ ರಾಕ್ಷಸಿ ಗುಣ ಹೊಂದಿದೆ. ಮಣ್ಣಿನಲ್ಲಿರುವ ಸತ್ವ ಹಾಗೂ ನೀರಿನ ಅಂಶ ಕಡಿಮೆಯಾಗುತ್ತದೆ. ಅಂತರ್ಜಲ ಬತ್ತುತ್ತದೆ. ಆದ್ದರಿಂದ ಮೂರೂರು, ಕಲ್ಲಬ್ಬೆ ಭಾಗದ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಗಿಡ ನೆಡುವುದನ್ನು ಸ್ಥಗಿತಗೊಳಿಸಬೇಕು. ಅರಣ್ಯ ಪ್ರದೇಶದಲ್ಲಿ ಮಂಗಗಳಿಗೆ ಹಾಗೂ ಕಾಡುಪ್ರಾಣಿಗಳಿಗೆ ತಿನ್ನುವಂತಹ ಆಹಾರವಿಲ್ಲದೇ, ಅವು ರೈತರು ಬೆಳೆದ ಬೆಳೆಗಳತ್ತ ಮುಖಮಾಡುತ್ತಿವೆ. ಇದರಿಂದ ರೈತನ ಬೆಳೆಗೆ ಹಾನಿಯಾಗುತ್ತಿದೆ. ಅಕೇಶಿಯಾ ಗಿಡ ನೆಡುವುದರ ಬದಲು ಇತರೇ ಹಣ್ಣು, ಔಷಧಿಯ ಗಿಡಗಳನ್ನು ನೆಡಬೇಕು. ಇದರಿಂದ ಪರಿಸರಕ್ಕೂ ಒಳಿತು ಎಂದರು.

ABOUT THE AUTHOR

...view details