ಕಾರವಾರ:ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾನದ್ದು ಆಕಸ್ಮಿಕ ಸಾವು. ಯಾವುದೇ ಕೋಮು ಗಲಭೆಯಿಂದ ನಡೆದ ಹತ್ಯೆಯಲ್ಲ. ಆತ ಗಲಭೆ ವೇಳೆ ಓಡುವಾಗ ಶೆಟ್ಟಿಕೆರೆಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಪರೇಶ್ ಮೇಸ್ತಾ ಸಾಯುವುದಕ್ಕೂ ಮೊದಲು ಕುಮಟಾದಲ್ಲಿ ನಡೆದ ಆಗಿನ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದ. ಸುಮಾರು 25 ಕಿ.ಮೀ. ಪ್ರಯಾಣಿಸಿ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಮನೆಗೆ ಬಂದಿದ್ದ. ನಂತರ ಮನೆಯಿಂದ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಬಿಐ ಅಧಿಕಾರಿಗಳು ಪರೇಶ್ ಮೇಸ್ತಾ ಒಡನಾಡಿಗಳು, ಆತನ ಸ್ನೇಹಿತರು, ಘಟನೆ ನಡೆದ ಸಿಸಿಟಿವಿ ಕ್ಯಾಮೆರಾ ಸೇರಿ ಸಾಕಷ್ಟು ಸಾಕ್ಷಿಗಳೊಂದಿಗೆ ನ್ಯಾಯಾಲಯಕ್ಕೆ ವಿಸ್ತ್ರತ ವರದಿ ಸಲ್ಲಿಸಿದ್ದು, ವರದಿಯಲ್ಲಿ ಕೊಲೆ ಮಾಡಲಾಗಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆರೋಪಿಗಳನ್ನು ದೋಷಮುಕ್ತಗೊಳಿಸಬಹುದು ಎಂದು ಹೇಳಿದೆ.
ಅಲ್ಲದೆ, ಪರೇಶ್ ಮೇಸ್ತಾ ಅವರ ಆಪ್ತ ಸ್ನೇಹಿತರ ಹೇಳಿಕೆ ದಾಖಲಿಸಿದ್ದು, ಅದರ ಪ್ರಕಾರ ಪರೇಶ್ ಮೇಸ್ತಾ ಕೆಲವೊಮ್ಮೆ ಮದ್ಯ ಸೇವಿಸಿಯೂ ಮನೆಗೆ ಬಂದಿದ್ದ. ಆಗಾಗ ಸ್ನೇಹಿತನ ಮನೆಯಲ್ಲಿಯೇ ಇರುತ್ತಿದ್ದ. ಸ್ನೇಹಿತರ ಜತೆ ಸೇರಿಸಿಕೊಂಡು ಮೀನು ವ್ಯಾಪಾರ ಮಾಡುತ್ತಿದ್ದ. ಯಾವ ಹುಡುಗಿಯನ್ನೂ ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ಹೋಗಲು ತಂದೆಯ ಒಪ್ಪಿಗೆ ಪಡೆದುಕೊಂಡಿದ್ದ ಎನ್ನುವುದು ಸೇರಿದಂತೆ ಅನೇಕ ಮಹತ್ವದ ಸಂಗತಿಗಳನ್ನು ಸಿಬಿಐ ತನಿಖೆ ತೆರೆದಿಟ್ಟಿದೆ.