ಭಟ್ಕಳ:ತಾಲೂಕಿನ ಹಳೆ ಬಸ್ ನಿಲ್ದಾಣದ ಸಮೀಪ ನಾಗಬನದ ಗುದ್ದಲಿ ಪೂಜೆಯನ್ನು ಕಳೆದ ಮಂಗಳವಾರ ಶಾಸಕ ಸುನೀಲ್ ನಾಯ್ಕ ನೆರವೇರಿಸಿದ್ದರು. ನಾಗಬನ ದೇವಸ್ಥಾನದ ಕಾಂಪೌಂಡ್ ನಿರ್ಮಾಣ ಪ್ರಾರಂಭಿಸಿದ ಕಾರಣ ಅನ್ಯಕೋಮಿನ 50-100 ಮಂದಿ ಕಾರ್ಯಕ್ಕೆ ಅಡ್ಡಿ ಪಡಿಸಿದ್ದು, ಅಂತಿಮವಾಗಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ ಸಭೆಯೂ ತಾರ್ಕಿಕ ಅಂತ್ಯ ಕಾಣದೇ ಅನ್ಯಕೋಮಿನ ಮುಖಂಡರು ಸಭೆಯಿಂದ ಹೊರ ನಡೆದಿದ್ದಾರೆ.
ನಾಗಬನದ ದೇವಾಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ ಸುನೀಲ್ ನಾಯ್ಕ ಮಂಗಳವಾರದಂದು ಗುದ್ದಲಿ ಪೂಜೆ ನೆರವೇರಿಸಿದ್ದರು. ಅದರಂತೆ ನಾಗಬನದ ಕಾಂಪೌಂಡ್ ಕೆಲಸ ಪ್ರಾರಂಭಿಸಿದ್ದು, ಇದಕ್ಕೆ ಅನ್ಯಕೋಮಿನ ಜನರು ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಕೆಲಸ ನಿಲ್ಲಿಸುವಂತೆ ತಕರಾರು ತೆಗೆದಿದ್ದಾರೆ.
ಕಾಂಪೌಂಡ್ ಕಟ್ಟುವುದು ಬೇಡ. ಜಾಗದ ವಿಷಯದ ಬಗ್ಗೆ ಇರುವ ಸಮಸ್ಯೆಗಳನ್ನು ಕಾನೂನು ಮೂಲಕ ಪರಿಹರಿಸಿದ ನಂತರ ಕಟ್ಟಿಕೊಳ್ಳಿ. ಈಗ ಕಾಂಪೌಂಡ್ ಕಟ್ಟಲು ಯಾಕೆ ಅನುಮತಿಯ ಮೇಲೆ ಕೊಟ್ಟಿದ್ದೀರಿ?. ಸದ್ಯಕ್ಕೆ ಕೆಲಸ ನಿಲ್ಲಿಸಿ ಎಂದು ಕೆಲಸಗಾರರಿಗೆ ಮತ್ತು ಕರ್ತವ್ಯದಲ್ಲಿದ್ದ ಪೊಲೀಸರಿಗೆ ತಿಳಿಸಿದ್ದಾರೆ. ಪರಿಸ್ಥಿತಿ ಅರಿತು ಸ್ಥಳಕ್ಕೆ ಜಮಾಯಿಸಿದ ಪೊಲೀಸರು ಕಾಂಪೌಂಡ್ ಕಟ್ಟುತ್ತಿರುವ ಕೆಲಸಗಾರರಿಗೆ ಕೆಲಸ ನಿಲ್ಲಿಸಲು ಹೇಳಿದ್ದು, ಚರ್ಚೆಯ ಬಳಿಕ ಕೆಲಸವನ್ನು ಮುಂದುವರಿಸಲು ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ತಹಶೀಲ್ದಾರರು ಬರಬೇಕೆಂದು ನಾಗಬನ ಪರವಾದ ಜನರು ತಾಕೀತು ಮಾಡಿದ್ದು, ಕೆಲ ಗಂಟೆಗಳ ಬಳಿಕ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿದರು. ಇದರ ಬೆನ್ನಲೇ ಸ್ಥಳಕ್ಕೆ ಶಾಸಕ ಸುನೀಲ ನಾಯ್ಕ ದಾಖಲೆ ಸಮೇತ ಭೇಟಿ ನೀಡಿ ಆರ್ಟಿಸಿಯಲ್ಲಿ ನಾಗಬನಕ್ಕೆ ಕಾಯ್ದಿಟ್ಟ ಸ್ಥಳ ಇದ್ದು. ಈ ವಿಷಯದಲ್ಲಿ ಯಾಕೆ ತೊಂದರೆ ಕೊಡುತ್ತಿದ್ದಾರೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಈ ಬಗ್ಗೆ ಡಿವೈಎಸ್ಪಿ ಬೆಳ್ಳಿಯಪ್ಪ ಕಾಂಪೌಂಡ್ ಕಟ್ಟಲು ವಿರೋಧ ತೆಗೆದ ಗುಂಪಿನವರು ಸಹಾಯಕ ಆಯುಕ್ತರ ಬಳಿ ತೆರಳಿದ್ದು, ನೀವು ಕೂಡ ಅಲ್ಲಿಗೆ ತೆರಳಿ ಸಭೆಯ ಮೂಲಕ ತೀರ್ಮಾನ ತೆಗೆದುಕೊಳ್ಳುವಂತೆ ಶಾಸಕರಿಗೆ ತಿಳಿಸಿದರು.