ಕಾರವಾರ:ಕಳೆದ ಕೆಲ ದಿನಗಳಿಂದ ಆಕ್ಷೇಪ, ಹೋರಾಟ, ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದ್ದ ನಗರದ ಟನಲ್ ಮಾರ್ಗದಲ್ಲಿ ಕೊನೆಗೂ ಜಿಲ್ಲಾಡಳಿತ ಸೋಮವಾರ ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಸುರಂಗ ಮಾರ್ಗದ ತಾಂತ್ರಿಕ ತಪಾಸಣೆಯನ್ನು ಅ.8 ರಂದು ನಿಗದಿಪಡಿಸಿರುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರವಾರದಿಂದ - ಬಿಣಗಾದವರೆಗೆ ನಿರ್ಮಿಸಲಾಗಿದ್ದ ಸುರಂಗ ಮಾರ್ಗದಲ್ಲಿ ಸುರಕ್ಷತೆ ದೃಷ್ಟಿಯಿಂದ ಸಂಚಾರವನ್ನು ನಿಷೇಧಿಸಿ ಮೂರನೇ ಸಂಸ್ಥೆಯಿಂದ ತಪಾಸಣೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಕಾರ್ಯಭಾರದ ನಿಮಿತ್ತ ಎನ್‌ಎಚ್‌ಎಐದವರು ತಾಂತ್ರಿಕ ತಪಾಸಣೆಯನ್ನು ತಜ್ಞರಿಂದ ಸೋಮವಾರ ಮಾಡುವುದಾಗಿ ತಿಳಿಸಿದ್ದು ಅ.8ರಂದು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ತಪಾಸಣೆ ಕಾರ್ಯದ ವಿಳಂಬದಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಹಾಗೂ ರಸ್ತೆ ಸಂಚಾರಿಗಳ ಅನುಕೂಲಕ್ಕಾಗಿ ಕಾರವಾರದಿಂದ ಬಿಣಗಾಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಕೋರಿಕೊಂಡ ಹಿನ್ನೆಲೆಯಲ್ಲಿ ನಿರ್ಬಂಧ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ.
ಅ. 8ರ ವರೆಗೆ ಸುರಂಗ 1 ಮತ್ತು 2ರಲ್ಲಿ ಉಂಟಾಗುವ ಯಾವುದೇ ಅನಾಹುತಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೇ ಜವಾಬ್ದಾರರಾಗಿದ್ದು ಮತ್ತು ಅ. 8ರಂದು ಕೈಗೊಳ್ಳುವ ಜವಾಬ್ದಾರಿ ಯೋಜನಾ ನಿರ್ದೇಶಕರದ್ದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಯಾವುದೇ ಪತ್ರ ವ್ಯವಹಾರ ನಡೆಸಲಾಗುವುದಿಲ್ಲ ಎನ್ನುವ ನಿಬಂಧನೆಯನ್ನು ಹಾಕಿ ಜಿಲ್ಲಾಡಳಿತ ಆದೇಶ ಹೊರಡಿಸಿ, ಟನಲ್ ಸಂಚಾರ ಆರಂಭಿಸಿದೆ.