ಕಾರವಾರ:ಲಕ್ಷಾಂತರ ಗಿಡಗಳನ್ನು ನೆಟ್ಟು ವೃಕ್ಷಮಾತೆ ಎನಿಸಿಕೊಂಡ ತುಳಸಿ ಗೌಡ ಅವರಿಗೂ ಭಾರಿ ಮಳೆಯಿಂದ ಸಂಕಷ್ಟ ಎದುರಾಗಿದೆ. ಮನೆ ಮುಂಭಾಗ ಹರಿಯುವ ಸಣ್ಣ ಹಳ್ಳಕ್ಕೆ ಸೇತುವೆ ಇಲ್ಲದೇ ಸಮಸ್ಯೆಯಾಗಿದೆ. ಇದರ ಬಗ್ಗೆ ಈ ಹಿಂದೆ ಬೇರೆ ಬೇರೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಫಲವಾಗದ ಕಾರಣ ನೇರ ಮುಕ್ಯ ಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ದೇಶದ ಅತ್ಯುನ್ನತ ನಾಗರಿಕ ಸಮ್ಮಾನಗಳಲ್ಲೊಂದಾದ ಪದ್ಮಶ್ರೀ ಪುರಸ್ಕಾರಕ್ಕೊಳಗಾಗಿದ್ದಾರೆ. ಎಷ್ಟೇ ದೊಡ್ಡ ಮಟ್ಟದ ಪ್ರಶಸ್ತಿ ಸ್ವೀಕರಿಸಿದರೂ ತಮ್ಮ ಪಾಲಿಗೆ ಬದುಕಲು ಸೂಕ್ತ ಮೂಲ ಸೌಕರ್ಯವಿಲ್ಲದೇ ಪರದಾಡಬೇಕಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಅಂಕೋಲಾದ ಹೊನ್ನಳ್ಳಿಯಲ್ಲಿರುವ ಮನೆ ಎದುರು ಸಣ್ಣ ಹಳ್ಳವೊಂದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ನಿತ್ಯ ಪೇಟೆಗಾಗಲಿ, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಾಗಲಿ, ಮಕ್ಕಳಿಗೆ ಶಾಲೆಗಾಗಲಿ ಹೋಗಬೇಕಾದರೆ ಜೀವಭಯದಲ್ಲೇ ದಾಟಿ ಹೋಗಬೇಕಿದೆ. ಪದ್ಮಶ್ರೀ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ತುಳಸಜ್ಜಿಯವರನ್ನ ಭೇಟಿಯಾಗಿದ್ದ ಅಧಿಕಾರಿಗಳಿಗೆ ಈ ಮಳೆಗಾಲದ ಸಮಸ್ಯೆಯ ಬಗ್ಗೆ ಅಜ್ಜಿ ಗಮನಕ್ಕೆ ತಂದಿದ್ದರಂತೆ. ಒಂದು ಸಣ್ಣ ಕಾಲುಸಂಕವನ್ನಾದರೂ ನಿರ್ಮಿಸಿಕೊಡಲು ಮನವಿ ಮಾಡಿಕೊಂಡಿದ್ದರಂತೆ. ಆದರೆ, ಯಾರೂ ಕೂಡ ಈವರೆಗೆ ಕಿವಿ ಕೊಟ್ಟಿಲ್ಲ ಎಂದು ತುಳಸಜ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.