ಕಾರವಾರ: ಕರಾವಳಿ ಭಾಗದಲ್ಲಿ ಸಿಆರ್ಜೆಡ್ ವಲಯದಲ್ಲಿ ಮರಳನ್ನು ತೆಗೆದು ಮಾರಾಟ ಮಾಡುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿತ್ತು. ಸದ್ಯಕ್ಕೆ ಮರಳುಗಾರಿಕೆ ಬಂದ್ ಮಾಡಿದ್ದರೂ ಜಿಲ್ಲೆಯಲ್ಲಿ ಅನಧಿಕೃತವಾಗಿ ಮರಳು ತೆಗೆದು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಕಾರವಾರ ತಾಲೂಕಿನ ಕಾಳಿ ನದಿಯಲ್ಲಿ ತೆಗೆದ ಮರಳನ್ನ ಗೋವಾಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಸಿಆರ್ಜೆಡ್ ವಲಯದಲ್ಲಿ ಮರಳುಗಾರಿಕೆ ಮಾಡುವುದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ, ಮರಳುಗಾರಿಕೆ ಮಾಫಿಯಾವಾಗಿದ್ದು ಬಂದ್ ಮಾಡುವಂತೆ ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿತ್ತು. ಹೀಗಾಗಿ, ಕಳೆದ ನಾಲ್ಕೈದು ತಿಂಗಳಿನಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಆಗಿರುವ ಕಾರಣ ಮರಳಿನ ಅಭಾವ ಸಹ ಎದುರಾಗಿದೆ. ಇದರ ನಡುವೆ ಸದ್ದಿಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುವ ದಂಧೆ ಜೋರಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ಕಾವೇರಿ ನದಿ ಪಾತ್ರ ಹಾಗೂ ಇತರ ಹಳ್ಳಗಳಲ್ಲಿ ಮರಳು ಗಣಿಗಾರಿಕೆ ನಿಷೇಧ: ಸಚಿವ ಹಾಲಪ್ಪ ಆಚಾರ್
ಅದರಲ್ಲೂ, ಕಾಳಿ ನದಿಯಲ್ಲಿ ಮರಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದು ರಾತ್ರೋರಾತ್ರಿ ಗೋವಾಕ್ಕೆ ಸಾಗಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಗೋವಾ ಗಡಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನು ಕಾರವಾರ ಉಪವಿಭಾಗ ಅಧಿಕಾರಿ ಹಿಡಿದಿದ್ದರು. ಹೀಗಾಗಿ, ಅಕ್ರಮಕ್ಕೆ ಕಡಿವಾಣ ಹಾಕುವಂತೆ ಕೆಲ ಸಂಘಟನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.