ಕರ್ನಾಟಕ

karnataka

ETV Bharat / state

ಸಚಿವ ಸ್ಥಾನಕ್ಕೆ ಕಾಗೇರಿ ಫಿಕ್ಸ್​​​​... ಹೆಬ್ಬಾರ್​ ಡೌಟ್​​​

ವಿಶ್ವಾಸಮತಯಾಚನೆ ಬಳಿಕ ಬಿಎಸ್​ವೈ ಸಂಪುಟ ರಚನೆ ಮಾಡಬೇಕಿದ್ದು, ಸ್ವಲ್ಪ ಗೊಂದಲಗಳಿಂದ ಕೂಡಿತ್ತು. ಒಂದೊಮ್ಮೆ ಶಿವರಾಮ್​ ಹೆಬ್ಬಾರ್​ಗೆ ಸಚಿವ ಸ್ಥಾನ ನೀಡಿದ್ದರೆ, ಕಾಗೇರಿಗೆ ಸಾಧ್ಯವಿಲ್ಲ. ಆದರೆ ಈಗ ಶಿವರಾಮ್​ ಹೆಬ್ಬಾರ್​ ಅನರ್ಹರಾಗಿದ್ದರಿಂದ ಕಾಗೇರಿಯವರಿಗೆ ಸಚಿವ ಸ್ಥಾನ ಫಿಕ್ಸ್​ ಎಂಬ ಸುದ್ಧಿ ಹರಿದಾಡುತ್ತಿದೆ.

By

Published : Jul 29, 2019, 11:54 AM IST

ಹೆಬ್ಬಾರ್​ ಮತ್ತು ಕಾಗೇರಿ

ಶಿರಸಿ:ಅತೃಪ್ತ ಶಾಸಕರೆಲ್ಲ ಸದ್ಯ ಅನರ್ಹಗೊಂಡಿದ್ದಾರೆ. ಶಾಸಕರ ಅನರ್ಹತೆಯ ಬೆನ್ನಲ್ಲೇ ನೂತನ ಬಿಜೆಪಿ ಸಂಪುಟ ರಚನೆಯ ಲೆಕ್ಕಾಚಾರ ಬುಡ ಮೇಲಾದಂತಿದೆ. ಇದು ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದ ಮೇಲೂ ಪರಿಣಾಮ ಬೀರಿದ್ದು, ಜಿಲ್ಲೆಯ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಸಹ ಅನರ್ಹರಾಗಿದ್ದಾರೆ. ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿಯ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ದಾರಿ ಸುಗಮವಾಯಿತು ಎಂಬ ಮಾತುಗಳು ಕೇಳಿಬರುತ್ತಿದೆ.

ರಾಜೀನಾಮೆ ನೀಡುವ ಮೊದಲು, ಶಾಸಕರಿಗೆ ಮಂತ್ರಿಗಿರಿ ನೀಡುವುದಾಗಿ ಬಿಜೆಪಿ ಒಡಂಬಡಿಕೆ ಮಾಡಿಕೊಂಡಿದೆ ಎಂಬ ಮಾತು ರಾಜಕಾರಣದ ಪಡಸಾಲೆಯಲ್ಲಿ ಕೇಳಿಬರುತ್ತಿದ್ದು, ಒಂದು ವೇಳೆ ರಾಜೀನಾಮೆ ಅಂಗೀಕಾರವಾಗಿದ್ದರೆ ಮಂತ್ರಿ ಸ್ಥಾನ ನೀಡಿ ಚುನಾವಣೆಗೆ ಹೋಗುವ ಪ್ಲ್ಯಾನ್ ಬಿಜೆಪಿ ಮಾಡಿತ್ತು. ಆದರೆ, ಈಗ ಶಾಸಕರ ಅನರ್ಹತೆಯಿಂದಾಗಿ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲದ ಕಾರಣ ಜಿಲ್ಲೆಯ ಕಾಂಗ್ರೆಸ್​​​ನ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಸಚಿವ ಸ್ಥಾನದ ರೇಸ್ ನಿಂದ ಹೊರ ಬಿದ್ದಿದ್ದಾರೆ. ಇದರಿಂದ ಶಾಸಕ ಕಾಗೇರಿಗೆ ಅನುಕೂಲವಾದಂತಾಗಿದೆ.

ಶಾಸಕ ಶಿವರಾಮ್​ ಹೆಬ್ಬಾರ್​

ಉತ್ತರ ಕನ್ನಡ ‌ಜಿಲ್ಲೆಯ ಅಕ್ಕಪಕ್ಕದ ಕ್ಷೇತ್ರಗಳಾದ ಶಿರಸಿ ಮತ್ತು ಯಲ್ಲಾಪುರ ಕ್ಷೇತ್ರವನ್ನು ಪ್ರತಿನಿಧಿಸುವ ಕಾಗೇರಿ ಮತ್ತು ಹೆಬ್ಬಾರ್ ಇಬ್ಬರೂ ಜಾತಿಯಲ್ಲಿ ಹವ್ಯಕ ಬ್ರಾಹ್ಮಣರಾಗಿದ್ದಾರೆ. ಬ್ರಾಹ್ಮಣ ಕೋಟಾದಡಿ ಸಚಿವ ಸ್ಥಾನ ಪಡೆಯಲು ಬೆಂಗಳೂರಿನ ಸುರೇಶ್ ಕುಮಾರ್, ಮೈಸೂರಿನ ರಾಮದಾಸ್ ಹೀಗೆ ಹಲವರು ಸರದಿಯಲ್ಲಿದ್ದಾರೆ. ಆದ ಕಾರಣ ಇಬ್ಬರಿಗೂ ಸಚಿವ ಸ್ಥಾನ ನೀಡುವುದು ಅಸಾಧ್ಯ ಎಂದು ಸರ್ಕಾರ ರಚನೆಗೆ ಕಾರಣರಾದ ಹೆಬ್ಬಾರರನ್ನು ಮಂತ್ರಿ ಮಾಡಿ, ಹಿರಿಯರು ಮತ್ತು ಪಕ್ಷ ನಿಷ್ಠೆ ಇರುವ ಕಾಗೇರಿಗೆ ಪಕ್ಷಕ್ಕಾಗಿ ತ್ಯಾಗ ಮಾಡಲು ಸೂಚಿಸಿದ್ದರು ಎನ್ನಲಾಗಿತ್ತು. ಆದರೆ, ಸ್ಪೀಕರ್ ತೀರ್ಪು ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿದ್ದು, ನಿರಾತಂಕವಾಗಿ ಸಚಿವ ಸ್ಥಾನ ಕಾಗೇರಿಗೆ ಒಲಿದು ಬಂದಿದೆ. ಮುಂದಿನ ರಾಜಕೀಯ ಲೆಕ್ಕಾಚಾರಗಳು ಸುಪ್ರೀಂ ತೀರ್ಪಿನ ಮೇಲಿದ್ದು, ಅಲ್ಲಿಯ ವರೆಗೆ ಜಿಲ್ಲಾ ಮಂತ್ರಿಯಾಗಿ ಕಾಗೇರಿಗೆ ಜಿಲ್ಲೆಯ ಅಭಿವೃದ್ಧಿ ಮಾಡಲು ಅವಕಾಶ ಸಿಕ್ಕಿದಂತಾಗಿದೆ.

ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಅನರ್ಹತೆ ರದ್ದುಗೊಳಿಸುವ ಆದೇಶ ಸುಪ್ರೀಂನಿಂದ ಪ್ರಕಟವಾದರೆ ಮಾತ್ರ ಶಾಸಕರಿಗೆ ಸಂಪುಟದಲ್ಲಿ ಸ್ಥಾನಮಾನ ಸಿಗಲಿದೆ. ಆಗ ಜಿಲ್ಲೆಯಲ್ಲಿ ಮಂತ್ರಿ‌ ಸ್ಥಾನಕ್ಕೆ ಹೆಬ್ಬಾರ್ ಅಥವಾ ಕಾಗೇರಿ ಎಂಬ ಸನ್ನಿವೇಶ ಉಂಟಾಗಬಹುದು ಅಥವಾ ಇಬ್ಬರಿಗೂ ಸಚಿವ ಸ್ಥಾನ ನೀಡಬಹುದು. ಆದರೆ, ಅನರ್ಹತೆಯ ಪ್ರಕರಣದಲ್ಲಿ ಸ್ಪೀಕರ್ ನಿರ್ಧಾರವನ್ನು ಸುಪ್ರೀಂ ಎತ್ತಿ ಹಿಡಿದಲ್ಲಿ ಶಾಸಕ ಕಾಗೇರಿ ಈ ಹಿಂದಿನಂತೆ ಪೂರ್ಣಾವಧಿ ಸಚಿವರಾಗಿ ಕಾರ್ಯನಿರ್ವಹಿಸಲು ಯಾವುದೇ ಅಡ್ಡಿ ಆತಂಕ ಇರುವುದಿಲ್ಲ ಎನ್ನುವುದು ಕಾರ್ಯಕರ್ತರ ಮಾತಾಗಿದೆ.

ABOUT THE AUTHOR

...view details