ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಹೊನ್ನಾವರದ ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಸರಕೊಂಡದಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿ ಎದುರಿಸಿದ್ದ ಜನಕ್ಕೆ ಇದೀಗ ಮತ್ತೊಂದು ಭೀತಿ ಎದುರಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗುಡ್ಡ ಪ್ರದೇಶದ ಕೆಳಗೆ 60ಕ್ಕೂ ಹೆಚ್ಚಿನ ಕುಟುಂಬಗಳು ವಾಸ ಮಾಡುತ್ತಿವೆ. ಈಗಾಗಲೇ ಬಹುತೇಕ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಂತರಿಸಲಾಗಿದೆ. ಗುಡ್ಡದ ಮೇಲೆ ಬೃಹದಾಕಾರದ ಬಂಡೆಗಳಿದ್ದು, ಸ್ವಲ್ಪ ಎಚ್ಚರ ತಪ್ಪಿದ್ರೂ ಅದರ ಕೆಳಗಿರುವ ನಿವಾಸಿಗಳಿಗೆ ಅಪಾಯ ತಪ್ಪಿದ್ದಲ್ಲ. ಅಪ್ಸರಕೊಂಡದಲ್ಲಿ ಗುಡ್ಡ ಕುಸಿಯುವ ಭೀತಿ ಇರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ನಾಯ್ಕರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ರು.