ಕಾರವಾರ : ಪ್ರಕೃತಿಯಲ್ಲಿ ದೇವರನ್ನು ಕಾಣುವ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಜಾನಪದ ಆಚರಣೆಗಳು ರೂಢಿಯಲ್ಲಿವೆ. ಕೆಲ ಸಂಪ್ರದಾಯಗಳು ಆಧುನಿಕ ಭರಾಟೆಯಲ್ಲಿ ಸ್ವಲ್ಪ ಮರೆಯಾಗಿದ್ದರೂ ಸಹ ಇಂದಿಗೂ ಕೆಲವೆಡೆ ಹಳೇ ಪದ್ಧತಿಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲಿ ಕರಾವಳಿಯಲ್ಲಿ ಆಚರಿಸಲಾಗುವ ಹೊಸ್ತು ಹಬ್ಬ ಕೂಡ ವಿಶೇಷವಾಗಿದೆ.
ಹೌದು, ಮೂರ್ನಾಲ್ಕು ತಿಂಗಳ ಮಳೆಗಾಲದಲ್ಲಿ ಗದ್ದೆ ಉಳುಮೆಗೈದು, ಬೆಳೆ ಬೆಳೆದ ಕರಾವಳಿಯ ರೈತರಿಗೆಲ್ಲ ಈಗ ಗದ್ದೆಗಳಲ್ಲಿ ಹೊಸ ತೆನೆ ಬರುವ ಸಂದರ್ಭ. ಈ ಸಂದರ್ಭವನ್ನು ಹೊಸ್ತು ಹಬ್ಬ ಅಥವಾ ಕದಿರಿನ ಹಬ್ಬವಾಗಿ ಆಚರಿಸಲಾಗುತ್ತಿದ್ದು, ಕರಾವಳಿಯಲ್ಲೆಡೆ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ. ಹೊಸ್ತು ಎಂದರೆ ಹೊಸತು ಎಂದರ್ಥ. ಈಗ ಕರಾವಳಿಯಲ್ಲಿ ಭತ್ತದ ಕಟಾವು ಕಾರ್ಯ ನಡೆಯುವುದರಿಂದ ಹೊಸ ತೆನೆ ಅಥವಾ ಕದಿರನ್ನು ಸ್ವಾಗತಿಸಿಕೊಳ್ಳುವ ಜಾನಪದ ಸಂಪ್ರದಾಯವೇ ಈ ಹಬ್ಬದ ಉದ್ದೇಶವಾಗಿದೆ. ನವರಾತ್ರಿಯ ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ದೇವರಿಗೆ ಗ್ರಾಮಸ್ಥರೆಲ್ಲ ಸೇರಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಈ ಹಬ್ಬವನ್ನು ಗ್ರಾಮದ ಪ್ರತಿ ಮನೆಗಳಲ್ಲೂ ಆಚರಿಸಲಾಗುತ್ತದೆ.