ಕಾರವಾರ: ಭೀಕರ ಮಳೆಯಿಂದ ಗುಡ್ಡ ಕುಸಿದು ಸಾವನ್ನಪ್ಪಿದ ಕುಟುಂಬಕ್ಕೆ ಸಾಂತ್ವನ ಹೇಳಿ ಸಾವನ್ನಪ್ಪಿದ ಪ್ರತಿಯೊಬ್ಬರಿಗೂ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಹಾಗೂ ಅವರ ಕುಟುಂಬದ ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಕರ್ಯ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುಡ್ಡ ಕುಸಿತದಿಂದ ಸಾವಿಗೀಡಾದ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಿಜಕ್ಕೂ ವಿಷಾದನೀಯ. ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಮನೆಗಳಿಗೆ ತೊಂದರೆ ಇದೆ. ಅಂತಹ ಮನೆಯವವರನ್ನು ಈಗಾಗಲೇ ಸ್ಥಳಾಂತರ ಮಾಡಲು ನೋಟಿಸ್ ಕೂಡಾ ನೀಡಲಾಗಿದೆ ಎಂದರು.
ಭಟ್ಕಳ ಪಟ್ಟಣ ಹಾಗೂ ಮುಟ್ಟಳ್ಳಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮೇಘಸ್ಪೋಟಗೊಂಡ ಕಾರಣ ಭಾರಿ ಮಳೆಯಾಗಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಚಿರೆಕಲ್ಲು ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಮಣ್ಣು ಸಡಿಲಗೊಂಡು ಗುಡ್ಡ ಕುಸಿದು ಅವಘಡ ಸಂಭವಿಸಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಈ ಪ್ರದೇಶದಲ್ಲಿ ಜಿಯೋಲಾಜಿಕಲ್ ಸರ್ವೇ ನಡೆಸಿ ಇನ್ನೂ ಯಾವ ಮನೆಗಳಿಗೆ ತೊಂದರೆ ಇದೆ ಎಂಬುದನ್ನು ಪತ್ತೆ ಹಚ್ಚಿ ಆ ಮನೆಗಳ ಸ್ಥಳಾಂತರಕ್ಕೆ ಮೊದಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಳೆ ಹಾನಿಯ ತುರ್ತು ಪರಿಹಾರಕ್ಕೆ 500 ಕೋಟಿ ಬಿಡುಗಡೆ:ರಾಜ್ಯದಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸಲು ತುರ್ತು ಪರಿಹಾರಕ್ಕಾಗಿ 500 ಕೋಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 14 ಜಿಲ್ಲೆಗಳ 115 ಹಳ್ಳಿಗಳಲ್ಲಿ ಭಾರಿ ಮಳೆಯಿಂದಾಗಿ ನೆರೆ ಹಾನಿ ಸಂಭವಿಸಿದೆ. ಬುಧವಾರ ಮತ್ತೆ ತುಮಕೂರಿನಲ್ಲಿ ನಾಲ್ಕು ಜನ ಹಾಗೂ ವಿಜಯನಗರದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ 600 ಮನೆಗಳು ಸಂಪೂರ್ಣ, 2 ಸಾವಿರಕ್ಕೂ ಹೆಚ್ಚು ಮನೆಗಳು ತೀವ್ರತರ ಹಾಗೂ 14 ಸಾವಿರಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ. ಎಲ್ಲದಕ್ಕೂ ಕೂಡ ಅನುದಾನ ಬಿಡುಗಡೆ ಮಾಡಲು ಈಗಾಗಲೇ ಸೂಚಿಸಲಾಗಿದೆ. 21,431 ಹೆಕ್ಟೇರ್ ಪ್ರದೇಶ ಬೆಳೆ ನಾಶವಾಗಿದ್ದು, ಇದು ಇನ್ನೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಜಂಟಿ ಸಮೀಕ್ಷೆ ಮಾಡಬೇಕಾಗಿರುವುದರಿಂದ ವರದಿ ಬಂದ ತಕ್ಷಣ ಪರಿಹಾರ ವಿತರಿಸಲಾಗುವುದು ಎಂದರು.
ಇನ್ನು ಭಟ್ಕಳದಲ್ಲಿ ಧಾರಾಕಾರವಾಗಿ ಸುರಿದ ಭಾರಿಮಳೆಯಿಂದಾಗಿ ಮನೆ, ಸಾವಿರಕ್ಕೂ ಹೆಚ್ಚು ಅಂಗಡಿಗಳಿಗೆ, ನೂರಾರು ಬೋಟ್ಗಳಿಗೆ, ರಸ್ತೆ ಸೇತುವೆಗಳಿಗೆ ಹಾನಿಯಾಗಿರುವ ಮಾಹಿತಿ ಇದೆ. ಸುಮಾರು 40 ಕೋಟಿ ರೂ ಹಾನಿಯಾಗಿರುವ ಬಗ್ಗೆ ಸದ್ಯ ಅಂದಾಜಿಸಲಾಗಿದೆ. ಎಷ್ಟೇ ಹಾನಿಯಾದರೂ ಮನೆ, ಅಂಗಡಿ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಲು ಸಿದ್ದವಿದೆ.