ಕಾರವಾರ : ನವೀಕರಿಸಿದ ಹಳೆ ಸೇತುವೆಯ ಭೀಮ್ ಬಿರುಕು ಬಿಟ್ಟ ಪರಿಣಾಮ ಸಂಚಾರ ಸ್ಥಗಿತಗೊಂಡ ಘಟನೆ ಅಂಕೋಲಾ ಸಮೀಪದ ಹಟ್ಟಿಕೇರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಕಾರವಾರ ಅಂಕೋಲಾ ನಡುವಿನ ಹಟ್ಟಿಕೇರಿ ಬಳಿಯ ಹಳ್ಳಕ್ಕೆ 40 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯನ್ನು ಕಳೆದ ಮೂರು ತಿಂಗಳ ಹಿಂದೆ ಖಾಸಗಿ ಕಂಪನಿಯೊಂದು ದುರಸ್ತಿಗೊಳಿಸಿ ಡಾಂಬರೀಕರಣದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಇಂದು ಬೃಹತ್ ವಾಹನವೊಂದು ಸಂಚರಿಸಿದ ಪರಿಣಾಮ ಸೇತುವೆ ಪಿಲ್ಲರ್ ಬೇರಿಂಗ್ ಕಟ್ಟಾಗಿ ಕುಸಿದಿದ್ದು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಗೋವಾಗೆ ಪ್ರಯಾಣ ಬೆಳೆಸಿದ್ದ ಮೂರು ಬಾರಿ ವಾಹನಗಳು ವಿದ್ಯುತ್ ಪರಿವರ್ತಕವನ್ನು ಹೊತ್ತು ಸಾಗುತ್ತಿದ್ದವು. ಹೈಡ್ರಾಲಿಕ್ ತಂತ್ರಜ್ಞಾನ ಹೊಂದಿರುವ ಈ ಬಾರಿ ವಾಹನ 138 ಚಕ್ರಗಳೊಂದಿಗೆ ಒಟ್ಟು 228 ಟನ್ ಭಾರ ಹೊಂದಿದೆ ಎಂದು ತಿಳಿದು ಬಂದಿದೆ. ಅಧಿಕ ಭಾರ ಹೊತ್ತೊಯ್ಯುತ್ತಿದ್ದ ಮೂರು ವಾಹನಗಳ ಪೈಕಿ ಮೊದಲ ವಾಹನ ಸೇತುವೆ ದಾಟಿದಾಗ ಈ ಅವಘಡ ಸಂಭವಿಸಿದೆ. ಉಳಿದೆರಡು ವಾಹನವನ್ನು ಸಂಚಾರ ಮಾಡದಂತೆ ತಡೆಯಲಾಗಿತ್ತು.
ವಾಹನ ಸಂಚಾರ ಸಂಪೂರ್ಣ ಸ್ಥಗಿತ : ಸೇತುವೆ ಮೇಲೆ ವಾಹನ ಸಂಚಾರ ಇರುವಾಗಲೇ ಸೇತುವೆ ಪಿಲ್ಲರ್ ಕುಸಿತ ಕಂಡಿದ್ದು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಸದ್ಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಮಾಡಲಾಗಿದೆ. ಹಳೆ ಸೇತುವೆ ಬಳಿಯೇ ಹೊಸ ಸೇತುವೆ ನಿರ್ಮಾಣ ಮಾಡಿದ್ದು, ಸದ್ಯ ಅದರ ಮೇಲೆ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಳೆಯ ಸೇತುವೆ ಮೇಲೆ ಸಂಚಾರ ಮಾಡದಂತೆ ರಸ್ತೆ ಮೇಲೆ ಮಣ್ಣಿನ ರಾಶಿ ಹಾಕಿ ಸಂಚಾರಕ್ಕೆ ತಡೆ ನೀಡಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಗಲಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.