ಭಟ್ಕಳ:ಮುರ್ಡೇಶ್ವರ ಕಡಲತೀರದಲ್ಲಿ ಕ್ಯಾಂಟೀನ್‌ನೊಂದರ ಕೆಳಗೆ ರಾತ್ರಿ ನಿಲ್ಲಿಸಿಟ್ಟಿದ್ದ ದೋಣಿಗೆ ಕಿಡಿಗೇಡಿಗಳು ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ.
ಸ್ಥಳೀಯ ಹರೀಶ್ ಹರಿಕಂತ್ರ ಎಂಬುವರಿಗೆ ಸೇರಿದ್ದ ಸಿಕ್ಕಿಂಗ್ ಎನ್ನುವ ಹೆಸರಿನ ದೋಣಿ ಹಾನಿಗೊಳಗಾಗಿದೆ. ವೆಸ್ಟ್ ಕೋಸ್ಟ್ ಸ್ಕೂಬಾ ಡೈವರ್ಸ್ ಅವರಿಗೆ ಸೇರಿದ ಪ್ರವಾಸಿಗರನ್ನು ಕರೆದುಕೊಂಡು ಹೋಗಲೆಂದು ದೋಣಿಯನ್ನು ಮೀಸಲಿರಿಸಲಾಗಿತ್ತು.
ರಾತ್ರಿ ಕಡಲತೀರದಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ದುಷ್ಕರ್ಮಿಗಳು ಕಳಚಿ ಬಿಟ್ಟಿದ್ದಾರೆ. ಇದರಿಂದಾಗಿ ದೋಣಿಯು ಅಲೆಗೆ ಸಿಲುಕಿ ಡೀಸೆಲ್ ಟ್ಯಾಂಕ್ ಒಡೆದಿದೆ. ಇಂಧನವೆಲ್ಲ ಸಮುದ್ರದಲ್ಲಿ ಸೋರಿಕೆಯಾಗಿದೆ. ಜತೆಗೆ, ದೋಣಿಯಲ್ಲೂ ರಂಧ್ರ ಉಂಟಾಗಿದ್ದು, ಇಂಜಿನ್ನಲ್ಲಿ ನೀರು ತುಂಬಿಕೊಂಡು ಹಾನಿಯಾಗಿದೆ ಎನ್ನಲಾಗಿದೆ.
ಈ ಕುರಿತು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ದೋಣಿಗೆ ಉಂಟಾದ ಹಾನಿಯನ್ನು ತಪ್ಪಿತಸ್ಥರಿಂದ ಭರಿಸಿಕೊಡಬೇಕು ಎಂದು ಮಾಲೀಕರು ಆಗ್ರಹಿಸಿದ್ದಾರೆ. ಪ್ರಕರಣ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.